ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು:
ಐಮಂಗಲದ ಮಹಾ ಶಿವಶರಣ ಹರಳಯ್ಯ ಗುರುಪೀಠದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಸ್ವತಂತ್ರ ಪೂರ್ವದಲ್ಲಿಯೇ ವಯಸ್ಕರ ಶಿಕ್ಷಣವನ್ನು ಪ್ರಾರಂಭಿಸಿದ ಮೊಟ್ಟ ಮೊದಲ ಮಹಿಳೆಯಾಗಿದ್ದಾರೆ ಎಂದರು.ಸಾವಿತ್ರಿಬಾಯಿ ಫುಲೆ ಈ ದೇಶದ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ದುಸ್ಥಿತಿಯ ಕಂಡು ಮನನೊಂದು ಇದರಿಂದ ಸಮಾಜವನ್ನು ಹೊರ ತರಬೇಕೆಂದು ನಿರ್ಧರಿಸಿದರು. ಈ ಜಡ್ಡುಗಟ್ಟಿದ ಸಮಾಜದಲ್ಲಿದ್ದ ಬಾಲ್ಯ ವಿವಾಹ ಪದ್ಧತಿ, ಸತಿ ಸಹಗಮನ ಪದ್ಧತಿ, ದಲಿತರ ಶೋಷಣೆ ಅಸ್ಪೃಶ್ಯತೆ ಆಚರಣೆಗಳನ್ನು ಹೋಗಲಾಡಿಸಲು ಶ್ರಮಿಸಿದರು. ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ನಿರ್ನಾಮ ಮಾಡಲು ಸ್ತ್ರೀ ವಿದ್ಯಾವಂತಳಾಗಬೇಕು, ಮಹಿಳೆಯು ಮಲೀನತೆಯಿoದ ಹೊರಬರಬೇಕು ಎಂಬ ಘೋಷವಾಗಿದ್ದ ಸ್ತ್ರೀ ಸಮಾನತೆ ವಾದವನ್ನು ಮುಂದಿಟ್ಟರು. ಅಂದು ಪ್ರಾರಂಭವಾದ ಹೋರಾಟ ಶಿಕ್ಷಣದ ಕ್ರಾಂತಿಗೆ ನಾಂದಿಯಾಯಿತು. ಅದುವೇ ವಯಸ್ಕರ ಶಿಕ್ಷಣ, ಸ್ತ್ರೀ ಶಿಕ್ಷಣ,ಅಸ್ಪೃಶ್ಯರಿಗಾಗಿ ಶಿಕ್ಷಣ, ಅನಾಥರು ಅಬಲೆಯರಿಗಾಗಿ ಶಿಕ್ಷಣ, ಸ್ವಾಭಿಮಾನಕ್ಕಾಗಿ ಶಿಕ್ಷಣ ಎಂಬ ಘೋಷ ವಾಕ್ಯದೊಂದಿಗೆ ಮಹಿಳೆಯರ ಸಂಘಟನೆಗೆ ಕಾರಣವಾಯಿತು.
ಆಗ ಪ್ರಾರಂಭವಾಗಿದ್ದೇ ಶಿಕ್ಷಣ ಕ್ರಾಂತಿ. ಅವರು ತಮ್ಮ ಅವಧಿಯಲ್ಲಿ 18 ಶಾಲೆಗಳನ್ನು ತೆರೆದರು. ಗಂಡನ ದುಡಿಮೆಯ ಪಾಲು ತನ್ನ ದುಡಿಮೆಯ ಪಾಲು ಎಲ್ಲವನ್ನು ಮಹಿಳಾ ಶಿಕ್ಷಣಕ್ಕಾಗಿ, ಶೂದ್ರರ ಶಿಕ್ಷಣಕ್ಕಾಗಿ ಮೀಸಲಿಟ್ಟರು. ಮಹಿಳೆ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಧ್ಯೇಯ ಹೊಂದಿದ್ದ ಅವರು ಸದಾ ಸ್ಮರಣೀಯರು ಎಂದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.