ಸಾವಿತ್ರಿಬಾಯಿ ಫುಲೆ ಅವರು ಬದುಕಿನಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿ, ಮದುವೆಯಾದ ಮೇಲೆ ಪತಿಯಿಂದ ಶಿಕ್ಷಣ ಪಡೆದು, ಅಂದಿನ ಕಾಲದಲ್ಲಿಯೇ ಹದಿನೆಂಟು ಶಾಲೆಗಳನ್ನು ತೆರೆದು ಸಾಧನೆಯನ್ನು ಮಾಡಿದ್ದು ಸಾಮಾನ್ಯ ಸಂಗತಿಯಲ್ಲ.
ಗದಗ: ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದ ದಿನಗಳಲ್ಲಿ ಸಾವಿತ್ರಿಬಾಯಿ ಫುಲೆ ಅವರು ಗಟ್ಟಿ ಧೈರ್ಯ ಮಾಡಿ ಶಿಕ್ಷಣ ನೀಡಿದ್ದು ಐತಿಹಾಸಿಕ ಸಾಧನೆ. ಸಾವಿತ್ರಿಭಾಯಿ ಫುಲೆ ಅವರು ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2780ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರು ಬದುಕಿನಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿ, ಮದುವೆಯಾದ ಮೇಲೆ ಪತಿಯಿಂದ ಶಿಕ್ಷಣ ಪಡೆದು, ಅಂದಿನ ಕಾಲದಲ್ಲಿಯೇ ಹದಿನೆಂಟು ಶಾಲೆಗಳನ್ನು ತೆರೆದು ಸಾಧನೆಯನ್ನು ಮಾಡಿದ್ದು ಸಾಮಾನ್ಯ ಸಂಗತಿಯಲ್ಲ ಎಂದರು.ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ಶಿಕ್ಷಕರ ದಿನಲನ್ನು ಆಚರಿಸುವುದಾದರೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಬೇಕು ಎಂದು ಹೇಳುತ್ತಿದ್ದರು. ಸಾವಿತ್ರಿಬಾಯಿ ಫುಲೆ ದಂಪತಿಗಳನ್ನು ಕೊಲೆ ಮಾಡಲು ಬಂದಾಗ ಅವರೊಂದಿಗೆ ನಡೆದ ಸಂವಾದವನ್ನು ಕೇಳಿ, ಕೊಲೆ ಮಾಡುವುದನ್ನು ಬಿಟ್ಟರು. ಆ ಕೊಲೆಗಾರರು ಮನಪರಿವರ್ತನೆ ಮಾಡಿಕೊಂಡು, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರು. ಸದ್ಗುಣ, ಸದಾಚಾರ, ಸದ್ಬುದ್ಧಿ ಬರಲು ಇಂಥ ಆದರ್ಶ ದಂಪತಿಗಳು ಸಾಕು. ಫುಲೆ ದಂಪತಿಗಳ ಆತ್ಮಶಕ್ತಿ ಅದ್ಭುತವಾದದ್ದು ಎಂದರು.ಜೆಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಶಕುಂತಲಾ ಸಿಂಧೂರ ಮಾತನಾಡಿ, ಸಾವಿತ್ರಿಬಾಯಿ ಫುಲೆ ದಂಪತಿಗಳ ಚರಿತ್ರೆಗಿಂತ ಚಾರಿತ್ರ‍್ಯ ನೋಡಬೇಕು. ಸತಿ ನೀತಿಯಂದರೆ ದಂಪತಿಗಳು ಬದುಕು ಹಾಲು ಜೇನಿನಂತೆ ಇರಬೇಕು. ಅದರಂತೆ ನಡೆದವರು ಸಾವಿತ್ರಿಬಾಯಿ ಫುಲೆ ದಂಪತಿಗಳು. ಸತಿ ಪತಿ ಇಬ್ಬರೂ ಗೌರವಿಸಬೇಕು. ಅಂದು 35 ವಿಧವಾ ಮಹಿಳೆಯರಿಗೆ ಬಾಣಂತಿತನ ಮಾಡಿಸಿದವರು ಸಾವಿತ್ರಿಬಾಯಿ ಫುಲೆಯವರು. ನಿಸ್ವಾರ್ಥ ಸೇವೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಸಾವಿತ್ರಿಬಾಯಿ ಮಹಿಳಾ ಕುಲಕ್ಕೆ ಮತ್ತು ಪುರುಷ ಕುಲಕ್ಕೆ ಮಾದರಿಯಾಗಿದ್ದರು ಎಂದರು.ಬಸವರಾಜ ವೆಂಕಟಾಪುರ ಮಾತನಾಡಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ಸೇವೆ ನೀಡಿದರು. ಧರ್ಮಗ್ರಂಥ ಪಠಣವನ್ನು ಅನುಶ್ರೀ ಎಸ್. ಅಗ್ಗದ ಹಾಗೂ ವಚನಚಿಂತನವನ್ನು ನಿರೀಕ್ಷಾ ಬಿ. ನಾಯ್ಕರ ನೆಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶಾಂತರಾಜು ಮಾಗನೂರು ದಾವಣಗೆರೆ ವಹಿಸಿದ್ದರು.ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.