ಬಾದಾಮಿ ತಾಲೂಕು ಕಾಕನೂರಿನ ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾದಾಮಿ ತಾಲೂಕು ಕಾಕನೂರಿನ ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹಾರಾಷ್ಟ್ರದ ಅಕ್ಷಯ ಗಜಾನನ ಅಂಬೋರೆ, ಕುನಾಲ್ ಋಷಿ ಬಂಧಿತರು. ಪ್ರಕರಣದಲ್ಲಿ ಈ ಹಿಂದೆ ಉತ್ತರ ಪ್ರದೇಶದ ಇಬ್ಬರನ್ನು ಬಂಧಿಸಲಾಗಿತ್ತು.ಪ್ರಕರಣ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಸಿದ್ದಾರ್ಥ ಗೋಯಲ್ ಅವರು, ಸೆ.2ರಂದು ಕಾಕನೂರಿನಲ್ಲಿರುವ ಎಸ್‌ಬಿಐ ಶಾಖೆಯ ಹಿಂದಿನ ಬಾಗಿಲು ಒಡೆದು ₹44 ಲಕ್ಷ ಮೌಲ್ಯದ ಚಿನ್ನಾಭವರಣ, ನಗದು ದೋಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲೇ ಉತ್ತರ ಪ್ರದೇಶ ಮೂಲದ ಮೊಹಮ್ಮದ ನವಾಬ್ ಹಸನ್ ಹಾಗೂ ಖಮರುಲ್ ಖಾನ್ ನನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ತೀವ್ರಗೊಳಿಸಿದ ನಂತರ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ಮಾಹಿತಿ ನೀಡಿದರು.ಗ್ರಾಮೀಣ ಭಾಗದಲ್ಲಿನ ಬ್ಯಾಂಕ್‌ಗಳನ್ನೇ ತಂಡ ಗುರಿಯಾಗಿಸುತ್ತಿತ್ತು. ಆರು ತಿಂಗಳ ಮುಂಚೆಯೇ ಎಸ್‌ಬಿಐ ಕಾಕನೂರಿನ ಶಾಖೆ ನೋಡಿಕೊಂಡು ಹೋಗಿದ್ದ ತಂಡ ಬ್ಯಾಂಕಿಗೆ ಬಿಗಿ ಭದ್ರತೆ ಇಲ್ಲದಿರುವುದನ್ನು ಗಮನಿಸಿತ್ತಲ್ಲದೆ, ಶಾಖೆಗೆ ಹಿಂದೆ ಒಂದು ಬಾಗಿಲಿರುವುದನ್ನು ಗಮನಿಸಿ ಕನ್ನ ಹಾಕಿತ್ತು. ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಮಾಡಿ ಯಾವುದೇ ಪುರಾವೆಗಳು ಸಿಗದಂತೆ ನೋಡಿಕೊಂಡಿದ್ದರು. ಆದರೆ ಸುತ್ತಲಿನ 60 ಕಿ.ಮೀ. ವ್ಯಾಪ್ತಿಯಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಕಲೆ ಹಾಕಿ ತನಿಖೆ ಆರಂಭಿಸಿದ್ದರು. ಹಲವು ಬಾರಿ ಉತ್ತರ ಪ್ರದೇಶಕ್ಕೂ ಭೇಟಿ ನೀಡಿದ ನಂತರ ಆರೋಪಿಗಳನ್ನು ಬಲೆಗೆ ಕೆಡವಿದ್ದರು. ಬಳಿಕ ಅದರಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಈಗ ಮಹಾರಾಷ್ಟ್ರದಿಂದ ಕರೆತಂದಿರುವುದಾಗಿ ತಿಳಿಸಿದರು.
ಬಂಧಿತ ಅಕ್ಷಯ ಮತ್ತು ಕುನಾಲ್ ಋಷಿಯಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಗ್ರಾಂ ಚಿನ್ನ, ₹1.25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ₹44 ಲಕ್ಷ ಮೌಲ್ಯದ ಆಭರಣ, ನಗದು ಕಳುವಾಗಿದ್ದು, ಈವರೆಗೆ ₹32 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ, ಹುನಗುಂದ ಡಿವೈಎಸ್ಪಿ ಸಂತೋಷ ಬನಹಟ್ಟಿ ಅವರ ಮಾರ್ಗದರ್ಶನದಲ್ಲಿ ಬಾದಾಮಿ ಸಿಪಿಐ ಕೆ.ಬಿ.ಬನ್ನೆ, ಪಿಎಸ್ಐಗಳಾದ ವಿಜಯಕುಮಾರ ರಾಠೋಡ, ಬಿ.ಎಂ.ರಬಕವಿ, ಎಚ್.ಕೆ.ನರಳೆ, ಸಿದ್ದಪ್ಪ ಯಡಹಳ್ಳಿ, ಎಎಸ್ಐ ಸಿ.ಎಂ.ಕುಂಬಾರ, ಅಶೋಕ ಚವಾಣ, ಎಂ.ಎಂ.ಸೋಲಾಪುರ, ಆನಂದ ಗೋಳಪ್ಪನವರ, ರಾಜು ಒಡೆಯರ, ಬಿ.ಎ.ವಾಲಿಕಾರ, ಆರ್.ಎಸ್. ಕರಿಗಾರ, ಸುರೇಶ ಮುತ್ತಲಗೇರಿ, ವಿ.ಎನ್. ಲಮಾಣಿ, ಶ್ರೀಶೈಲ ನಡಗೇರಿ, ಲಾಲಸಾಬ ನದಾಫ್, ರವಿ ದಾಸರ, ಪ್ರವೀಣ ಘಾಟಗೆ, ವಿಜಯ ತುಂಬದ, ಮಂಜು ಸಂಗೊಂದಿ, ಕಲ್ಲಪ್ಪ ದಂದರಗಿ, ರವಿ ಮರೆಯನ್ನವರ, ಜಿ.ಎಸ್.ಹೊಸಮನಿ, ಸಿ.ಎಂ.ಕೋಟಿ, ಬಿ.ಎಂ.ಮೊಘಲನ್ನವರ, ಮಂಜುನಾಥ ಉಪ್ಪಾರ, ಮಂಜುನಾಥ ಕುಂದರಗಿ, ಮಹಾಂತೇಶ ಹರದೊಳ್ಳಿ, ಸಿ.ಎಚ್.ಮೇತ್ರಿ, ಚಂದ್ರು ಜಟ್ಟೆಪ್ಪಗೋಳ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳ ಪತ್ತೆಗೆ ತನಿಖೆ ಮುಂದವರಿದಿದೆ ಎಂದು ಎಸ್ಪಿ ಗೋಯಲ್ ತಿಳಿಸಿ ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ.
ತೆಲಂಗಾಣದ ಪ್ರಕರಣವೂ ಬೆಳಕಿಗೆ:ತನಿಖೆ ವೇಳೆ ತೆಲಂಗಾಣದ ರಾಯಪರ್ಥಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಸ್‌ಬಿಐ ಶಾಖೆಗೂ ಈ ತಂಡ ಕನ್ನ ಹಾಕಿರುವುದು ಬೆಳಕಿಗೆ ಬಂದಿದ್ದು, ಈ ದರೋಡೆಗೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರೂ ಸಹ ತೀವ್ರ ಶೋಧ ನಡೆಸಿದ್ದರು ಆರೋಪಿಗಳು ಸಿಕ್ಕಿರಲಿಲ್ಲ. ಆದರೆ ಬಾದಾಮಿ ತಾಲೂಕಿನ ಕಾಕನೂರು ಶಾಖೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆ ಕೈಗೊಂಡ ಬಾಗಲಕೋಟೆ ಪೊಲೀಸರಿಗೆ ಈ ತಂಡ ತೆಲಂಗಾಣದಲ್ಲೂ ಬ್ಯಾಂಕಿಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಅಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ 244.20 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿರುವ ಎಸ್ಪಿ ಗೋಯಲ್ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.