ಎಸ್ಸಿ ಎಂದೇಳಿ ಮದುವೆ ಬಹಿರಂಗಕ್ಕೆ ಒಪ್ಪದ ಪೇದೆಗೆ ಜಾಮೀನು ನಕಾರ

| Published : Nov 16 2025, 02:00 AM IST

ಎಸ್ಸಿ ಎಂದೇಳಿ ಮದುವೆ ಬಹಿರಂಗಕ್ಕೆ ಒಪ್ಪದ ಪೇದೆಗೆ ಜಾಮೀನು ನಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯಲ್ಲಿದ್ದ ಸಾಯಿಬಾಬಾ ಫೋಟೋ ಮುಂದೆ ಮಹಿಳಾ ಪೇದೆಗೆ ತಾಳಿ ಕಟ್ಟಿ, ಲೈಂಗಿಕವಾಗಿ ಬಳಸಿಕೊಂಡ ನಂತರ ಆಕೆ ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಕಾರಣಕ್ಕೆ ಪತ್ನಿಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಿರಾಕರಿಸಿದ ಹಾಗೂ ಮತ್ತೊಂದು ಹುಡುಗಿಯೊಂದಿಗೆ ವಿವಾಹ ನಿಶ್ಚಯಿಸಿಕೊಳ್ಳುವ ಮೂಲಕ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಪೇದೆಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯಲ್ಲಿದ್ದ ಸಾಯಿಬಾಬಾ ಫೋಟೋ ಮುಂದೆ ಮಹಿಳಾ ಪೇದೆಗೆ ತಾಳಿ ಕಟ್ಟಿ, ಲೈಂಗಿಕವಾಗಿ ಬಳಸಿಕೊಂಡ ನಂತರ ಆಕೆ ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಕಾರಣಕ್ಕೆ ಪತ್ನಿಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಿರಾಕರಿಸಿದ ಹಾಗೂ ಮತ್ತೊಂದು ಹುಡುಗಿಯೊಂದಿಗೆ ವಿವಾಹ ನಿಶ್ಚಯಿಸಿಕೊಳ್ಳುವ ಮೂಲಕ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಪೇದೆಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಅಮೃತೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಭಗವಂತರಾಯ ಬಸಂತರಾಯ ಬಿರಾದಾರ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ಈ ಆದೇಶ ಮಾಡಿದೆ.

ಮೇಲ್ಮನವಿದಾರ, ದೂರುದಾರೆಯ ಮನೆಯಲ್ಲಿನ ಭಗವಾನ್ ಸಾಯಿಬಾಬಾ ಫೋಟೋ ಮುಂದೆ ತಾಳಿ ಕಟ್ಟಿದ್ದ. ನೀನು ಪರಿಶಿಷ್ಟ ಜಾತಿಗೆ ಸೇರಿರುವ ಕಾರಣ ಕೆಲವೊಂದು ಸಮಸ್ಯೆಗಳಿವೆ. ಅದಕ್ಕಾಗಿ ಮದುವೆಯಾದ ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು. ವಿವಾಹ ನೋಂದಾಯಿಸಿದ ನಂತರ ಎಲ್ಲರಿಗೂ ತಿಳಿಸೋಣವೆಂದು ಹೇಳಿರುವುದು ಪ್ರಕರಣದ ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿಯಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ದೂರುದಾರೆಯನ್ನು ಹೆಂಡತಿಯಾಗಿ ಬಹಿರಂಗ ಮಾಡಲಾಗುವುದು ಎಂದು ಆರೋಪಿ ನೀಡಿದ್ದ ಭರವಸೆ ನಂಬಿದ್ದ ದೂರುದಾರೆ ಹಲವು ದಿನ ಮೌನವಾಗಿದ್ದರು. ಅಂತಿಮವಾಗಿ ತಾನು ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂಬ ಕಾರಣ ನೀಡಿ ಹೆಂಡತಿಯಾಗಿ ಸ್ವೀಕರಿಸಲು ಆರೋಪಿ ನಿರಾಕರಿಸುತ್ತಿರುವುದು ಖಚಿತವಾದ ತಕ್ಷಣವೇ ಸಂತ್ರಸ್ತೆ ದೂರು ನೀಡಿದ್ದಾರೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ( ದೌರ್ಜನ್ಯ ತಡೆ ) ಕಾಯ್ದೆಯ ಸೆಕ್ಷನ್ 18ಎ ಅಡಿಯಲ್ಲಿ ಅಪರಾಧವಾಗಲಿದ್ದು, ನಿರೀಕ್ಷಣಾ ಜಾಮೀನಿಗೆ ಆರೋಪಿ ಅರ್ಹನಾಗಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣವೇನು?

ದುರುದಾರೆ ಮತ್ತು ಆರೋಪಿ ಇಬ್ಬರೂ ಪೇದೆಗಳಾಗಿದ್ದು, ಅಮೃತೂರು ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ‘ಆರೋಪಿಯು ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದ ಹಾಗೂ ದೈಹಿಕ ಸಂಬಂಧ ಬೆಳೆಸುವ ಇಂಗಿತ ವ್ಯಕ್ತಪಡಿಸಿದ್ದ. ಅದಕ್ಕೆ ನಾನು ಒಪ್ಪದಿದ್ದಾಗ, ‘ನಾನು ನಿನ್ನ ಗಂಡ ಆಗುವವನು; ನನ್ನ ಮೇಲೆ ನಂಬಿಕೆ ಇಡು’ ಎಂದು ತಿಳಿಸಿ ಮನೆಯಲ್ಲಿದ್ದ ಸಾಯಿಬಾಬಾ ಫೋಟೋ ಮುಂದೆ ತಾಳಿಕಟ್ಟಿದ್ದ. ನಂತರ ನನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದ. ಆದರೆ, ತಾಳಿ ಕಟ್ಟಿರುವ ವಿಚಾರ ಹೊರಗಡೆ ತಿಳಿದರೆ ಸಮಸ್ಯೆಯಾಗಲಿದೆ. ರಿಜಿಸ್ಟ್ರಾರ್ ಮದುವೆ ಆಗೋಣ. ಅಲ್ಲಿಯವರೆಗೆ ಮದುವೆಯಾದ ವಿಚಾರ ಗೌಪ್ಯವಾಗಿಡುವಂತೆ ಸೂಚಿಸಿದ್ದ. . ಪತ್ನಿಯಾಗಿ ಬಹಿರಂಗಪಡಿಸಲು ಒತ್ತಾಯಿಸಿದ್ದಕ್ಕೆ, ಜಗಳ ತೆಗೆದು ನನ್ನ ಮೇಲೆ ಹಲ್ಲೆ ನಡೆಸಿದ್ದ. ಪದೇ ಪದೇ ಜಾತಿ ಹೆಸರು ಉಲ್ಲೇಖಿಸಿ ನಿಂದಿಸಿದ್ದರು’ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದರು.

ಇದರಿಂದ ಆರೋಪಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ ಮತ್ತು ಹಲ್ಲೆ ಆರೋಪದಡಿ ದೂರು ದಾಖಲಿಸಿಕೊಂಡಿಸಿದ್ದ ಅಮೃತೂರು ಠಾಣಾ ಪೊಲೀಸರು, ತನಿಖೆ ಪ್ರಾರಂಭಿಸಿದ್ದರು. ಬಂಧನ ಭೀತಿ ಎದುರಾದ ಕಾರಣ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ತುಮಕೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಹಾಗಾಗಿ, ಆರೋಪಿ ಹೈಕೋರ್ಟ್‌ ಮೋರೆ ಹೋಗಿದ್ದನು.