ಸಾರಾಂಶ
ಒತ್ತುವರಿ - ಕಂದಾಯ ಭೂಮಿ ಸಮಸ್ಯೆ ಬಗೆಹರಿಸಲು ಒತ್ತಾಯ । ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರೊಂದಿಗೆ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಹಲವು ಸಮಸ್ಯೆಗಳು ಅನಾವರಣಗೊಂಡವು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಮುಖಂಡರು ಜನರ ಮೂಲಭೂತ ಸಮಸ್ಯೆಗಳು, ಕಂದಾಯ, ಒತ್ತುವರಿ ಭೂಮಿ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.ದಲಿತರಿಗೆ ಮಂಜೂರಾಗಿರುವ ಜಮೀನುಗಳಿಗೆ ಹಕ್ಕುಪತ್ರ , ಎನ್.ಆರ್.ಪುರ ಅಂಬೇಡ್ಕರ್ ಭವನಗಳಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯ ಗಳನ್ನು ಒದಗಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ನೋಂದಣಿ ಕೌಂಟರ್‌ಗಳನ್ನು ತೆರೆಯುವಂತೆ ಮುಖಂಡರು ಅಧಿಕಾರಿ ಗಳಿಗೆ ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಸಂವಿಧಾನ ಅರಿವು ಕಾರ್ಯಕ್ರಮ ಗಳನ್ನು ತಾಲೂಕು ಮಟ್ಟದಲ್ಲೂ ಆಯೋಜಿಸಬೇಕು. ಹೆಚ್ಚುವರಿಯಾಗಿ ಅಂಬೇಡ್ಕರ್ ಸಮುದಾಯ ಭವನಗಳನ್ನು ಮಂಜೂರು ಮಾಡಬೇಕು. ಎಸ್ಸಿ.ಎಸ್ಟಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿಳಂಬವಾಗುತ್ತಿದ್ದು ಶೀಘ್ರ ಕೊಡಿಸುವಂತೆಯೂ ಮುಖಂಡರು ಗಮನ ಸೆಳೆದರು.ನ್ಯಾಯಾಲಯಗಳಲ್ಲಿ ಜಾಮೀನು ಸಲ್ಲಿಸುವ ಸಮಯದಲ್ಲಿ ಪರಭಾರೆ ನಿಷೇಧ ಪಹಣಿ ಸಲ್ಲಿಸಿದರೆ ನ್ಯಾಯಾಲಯ ಅದನ್ನು ಪರಿಗಣಿಸುವಂತೆ ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಕಳೆದ ಬಾರಿಯ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳ ಅನುಪಾಲನಾ ವರದಿಯನ್ನು ಸಭೆಗೆ ತಿಳಿಸಿ ಮಾತನಾಡಿ, ಕಳೆದ ಬಾರಿ ಸಭೆಯಲ್ಲಿ ಚರ್ಚೆಗೊಂಡ ಹಲವು ವಿಷಯಗಳನ್ನು ಸಂಬಂಧಿಸಿದ ಜಿಲ್ಲೆಯ ವಿವಿಧ ಇಲಾಖೆಗಳ ಗಮನಕ್ಕೆ ತಂದ ಸಂದರ್ಭದಲ್ಲಿ ಇಲಾಖೆಗಳ ಮುಖ್ಯಸ್ಥರು ಸಕಾರಾತ್ಮಕ ವಾಗಿ ಸ್ಪಂದಿಸಿ ಹಲವು ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಿದ್ದಾರೆ ಎಂದರು.ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮದ್ಯ ಮಾರಾಟದ ದೂರುಗಳ ವ್ಯಾಪಕವಾಗಿ ಕೇಳಿ ಬಂದ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಗೆ ಪೊಲೀಸ್ ಇಲಾಖೆಯಿಂದ ಪತ್ರ ಬರೆದ ಪರಿಣಾಮ 321 ಪ್ರಕರಣಗಳನ್ನು ದಾಖಲಿಸಿ, 328 ಮಂದಿಯನ್ನು ಬಂಧಿಸಿ ಒಂದು ಸಾವಿರ ಲೀಟರ್ ಗೂ ಹೆಚ್ಚು ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 64 ಎಸ್ಸಿ.ಎಸ್ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 54 ಪ್ರಕರಣಗಳಿಗೆ 80.60 ಲಕ್ಷ ರು. ಪರಿಹಾರ ನೀಡಲಾಗಿದೆ ಎಂದರು.ಈ ಸಭೆಯಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ರಶ್ಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಂಧ್ಯಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. 31 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಅಧ್ಯಕ್ಷತೆಯಲ್ಲಿ ಎಸ್ಸಿ.ಎಸ್ಟಿ. ಕುಂದುಕೊರತೆ ಸಭೆ ನಡೆಯಿತು. ಎಎಸ್‌ಪಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ರಶ್ಮಿ ಇದ್ದರು.