ಸಾರಾಂಶ
ಮೈಸೂರಿನ ಮೂಡಾದಲ್ಲಿ ಸುಮಾರು ₹4 ರಿಂದ 5 ಸಾವಿರ ಕೋಟಿಯವರೆಗೆ ಹಗರಣ ಆಗಿದೆ. ಸಿಎಂ ಪತ್ನಿ, ಕುಟುಂಬದವರು ಅಕ್ರಮವಾಗಿ ನಿವೇಶನಗಳನ್ನು ಪಡೆಯಲಾಗಿದ್ದು, ಅವು ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮೈಸೂರಿನ ಮೂಡಾದಲ್ಲಿ ಸುಮಾರು ₹4 ರಿಂದ 5 ಸಾವಿರ ಕೋಟಿಯವರೆಗೆ ಹಗರಣ ಆಗಿದೆ. ಸಿಎಂ ಪತ್ನಿ, ಕುಟುಂಬದವರು ಅಕ್ರಮವಾಗಿ ನಿವೇಶನಗಳನ್ನು ಪಡೆಯಲಾಗಿದ್ದು, ಅವು ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಆರೋಪಿಸಿದರು.ನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರ ಹೆಸರಿನಲ್ಲಿ 38 ಸಾವಿರ ಚದರ ಅಡಿ ವಿಸ್ತಿರ್ಣದ 14 ನಿವೇಶನಗಳನ್ನು ಪಡೆಯಲಾಗಿದೆ. ಈ ಭೂಮಿ 1992ರಲ್ಲಿ ಸ್ವಾಧೀನ ಆಗಿದ್ದು, 1998ರಲ್ಲಿ ಡಿ ನೋಟಿಫೈ ಆಗಿದೆ. ಅದನ್ನು 2004ರಲ್ಲಿ ಪಾರ್ವತಮ್ಮ ಅವರ ಸಹೋದರ ಖರೀದಿ ಪಡೆದಿದ್ದು, 2009-10ರಲ್ಲಿ ಸಹೋದರಿಗೆ ಗಿಫ್ಟ್ ಕೊಟ್ಟಿದ್ದಾರೆ. ಒಟ್ಟು 3 ಎಕರೆ 14ಗುಂಟೆ ಜಮೀನಿನಲ್ಲಿ 50:50ರ ಅನುಪಾತದಲ್ಲಿ ನಿವೇಶನ ಪಡೆದುಕೊಂಡಿದ್ದೇವೆ ಎನ್ನುತ್ತಾರೆ.ಮತ್ತೊಂದು ಪ್ರಮುಖ ವಿಚಾರವೆಂದರೇ 2009ರಲ್ಲಿ ಉಡುಗೊರೆಯಾಗಿ ಬಂದಿದ್ದೇ ಆದಲ್ಲಿ, 2013ರ ಚುನಾವಣೆಯ ಅಫಿಡಿವಿಟ್‌ನಲ್ಲಿ ಏಕೆ ನಮೂದಿಸಿಲ್ಲ?. ಅಲ್ಲದೆ 2018ರಲ್ಲಿ ಈ ಆಸ್ತಿಗೆ ಕೇವಲ ₹18 ಲಕ್ಷ ಮೊತ್ತವನ್ನು ಅಂದಾಜು ಮಾಡಿದಿರಿ, ಇದೀಗ ಈ ಆಸ್ತಿಯ ಬೆಲೆ ಕೋಟಿ ಕೋಟಿ ಆಗಿದೆ ಎಂದು ಹೇಳುತ್ತೀರಿ. ನೀವು ಇದನ್ನು ಅಕ್ರಮವಾಗಿ ಪಡೆದುಕೊಂಡಿದ್ದೀರಿ ಎಂಬುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ.
ನಿವೇಶನ ಹಂಚಿಕೆಯು 25 ಹಾಗೂ 75ರ ಅನುಪಾತದಲ್ಲಿ ಕೊಡುವ ನಿವೇಶನಗಳಲ್ಲಿ 75 ಪ್ರತಿಷತ ನಿವೇಶನಗಳನ್ನು ಆಕ್ಷನ್ ಸೇಲ್ ಮೂಲಕ ಹಾಗೂ 25 ಪ್ರತಿಷತ ರಾಷ್ಟ್ರಸೇವೆ ಮಾಡಿದವರಿಗೆ, ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಕೊಡಬೇಕು ಎಂಬ ನಿಯಮವಿದೆ. ಆದರೆ, ಯಾವುದೇ ಸೇವೆ ಹಾಗೂ ಸಾಧನೆ ಮಾಡದೆ ಸಿಎಂ ಕುಟುಂಬ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಮೂಡಾದಲ್ಲಿ ಹಗರಣಗಳು ಆಗಿವೆ.ನೇರವಾಗಿ ಸಿಎಂ ಕುಟುಂಬದ ಮೇಲೆ ಆರೋಪ ಇರುವುದರಿಂದ ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಅಥವಾ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.ವಾಲ್ಮಿಕಿ ನಿಗಮದಲ್ಲಿ ಆಗಿರುವ ಹಗರಣ ನೂರಾರು ಕೋಟಿಯದ್ದಾಗಿದೆ. ಹಲವಾರು ಕಡೆಗಳಲ್ಲಿ ಹಗರಣ ಮಾಡಿದ್ದೀರಿ. ಹೀಗಾಗಿ ಕಾಂಗ್ರೆಸ್ ಜೀನ್ಸ್ ನಲ್ಲಿಯೇ ಹಗರಣ ಮನೆ ಮಾಡಿದೆ. ಇದು ಲೂಟಿಕೋರರ ಸರ್ಕಾರ ಎಂದು ಆರೋಪಿಸಿದರು. ಹಗರಣವನ್ನು ತನಿಖೆಗೆ ವಹಿಸಿ, ವಿಶ್ವಾಸ ಉಳಿಸಿಕೊಳ್ಳಿ, ಸಿಎಂ ಸಿದ್ದರಾಮಯ್ಯನವರೇ ಸಮಾಜವಾದಿ ಸಿದ್ಧಾಂತದ ಮೇಲೆ ಬಂದಿರುವ ನೀವು ಮಜಾವಾದಿ ಸಿಎಂ ಅನಿಸಿಕೊಳ್ಳಬೇಡಿ. ಮೂಡಾ ಹಾಗೂ ವಾಲ್ಮಿಕಿ ಹಗರಣಗಳಲ್ಲಿ ಯಾರು ಯಾರು ಇದ್ದಾರೋ ಎಲ್ಲವೂ ತನಿಖೆಯಾಗಿ, ಅವರೆಲ್ಲರಿಗೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.ಈಗಾಗಲೇ ವಿಜಯಪುರದಲ್ಲೂ ಸಾಕಷ್ಟು ಭೂ ಹಗರಣಗಳು ಆಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಪಕ್ಷದ ಮಾಜಿ ಸಚಿವರು, ಹಾಲಿ ಶಾಸಕರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಪ್ರತಿಭಟನೆ ಮಾಡುವ ಮೂಲಕ ಪ್ರಾಥಮಿಕ ಹಂತದ ಹೋರಾಟ ಮಾಡುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೋ ನೋಡಿ, ಮುಂದಿನ ದಿನಗಳಲ್ಲಿ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜಯ್ ಐಹೊಳೆ, ಸಂಜಯ್ ಪಾಟೀಲ ಕನಮಡಿ. ಮಳುಗೌಡ ಪಾಟೀಲ, ವಿಜಯ್ ಜೋಶಿ, ಶರಣಬಸವ ಕುಂಬಾರ ಉಪಸ್ಥಿತರಿದ್ದರು.