ಸಾರಾಂಶ
ಬೆಂಗಳೂರು : ಗೌರಿ ಗಣೇಶದ ಹಬ್ಬದ ವೇಳೆ ಗಣೇಶ ಮೂರ್ತಿಗಳ ವಿಸರ್ಜನೆಗೆ 41 ಕೆರೆಗಳ ಶಾಶ್ವತ ಕಲ್ಯಾಣಿ ಸೇರಿದಂತೆ 462 ಸ್ಥಳಗಳಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿದೆ. ವಿಸರ್ಜನಾ ಸ್ಥಳಗಳ ವಿವರ ಹಾಗೂ ಆಯಾ ವಿಸರ್ಜನಾ ಸ್ಥಳಗಳಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳ ವಿವರಗಳನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ಪಡೆಯಬಹುದಾಗಿದೆ.
ಹಲಸೂರು, ಸ್ಯಾಂಕಿ, ಯಡಿಯೂರು ಕೆರೆ, ಎಫ್‌ಸಿಐ ಲೇಔಟ್, ಬಿ.ನಾರಾಯಣಪುರ ಲೇಔಟ್, ವಿಭೂತಿಪುರ ಕೆರೆ, ಚೆಲ್ಕೆರೆ, ಹೊರಮಾವು ಅಗರ ಕೆರೆ ಸೇರಿದಂತೆ ಒಟ್ಟು 41 ಕೆರೆಗಳ ಶಾಶ್ವತ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಕಲ್ಯಾಣಿಗಳು ಇಲ್ಲದ ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ.
ಜತೆಗೆ, ನಗರದ ಪ್ರಮುಖ ದೇವಸ್ಥಾನ, ಜಂಕ್ಷನ್, ಮುಖ್ಯ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಪ್ರತಿ ವಾರ್ಡ್‌ಗೆ 3ರಿಂದ 5ರಂತೆ ಒಟ್ಟು 462 ಸ್ಥಳದಲ್ಲಿ ತಾತ್ಕಾಲಿಕ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಈ ವಿವರಗಳನ್ನೂ ಬಿಬಿಎಂಪಿ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಡೆಯಬಹುದಾಗಿದೆ. ಕ್ಯೂಆರ್ ಕೋಡ್ ಜತೆಗೆ ಬಿಬಿಎಂಪಿಯ ವೆಬ್‌ಸೈಟ್ ಲಿಂಕ್ https://apps.bbmpgov.in/ganesh2024/ ಗೆ ಭೇಟಿ ನೀಡಿ ಸಹ ಮಾಹಿತಿ ಪಡೆಯಬಹುದಾಗಿದೆ.
ಕಲ್ಯಾಣಿಗಳ ಬಳಿಕ ಸುರಕ್ಷತಾ ಕ್ರಮ
ಗಣೇಶ ಮೂರ್ತಿ ವಿಸರ್ಜನೆಗೆ ಸಜ್ಜುಗೊಳಿಸಲಾಗಿರುವ 41 ಕೆರೆ ಹಾಗೂ ಕಲ್ಯಾಣಿಗಳ ಬಳಿ ಸಾರ್ವಜನಿಕರ ಸುರಕ್ಷತೆಗಾಗಿ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ತಂಡ, ಕಲ್ಯಾಣಿ ಬಳಿ ವಿದ್ಯುತ್ ದೀಪದ ವ್ಯವಸ್ಥೆ, ಬ್ಯಾರಿಕೇಡ್, ಧ್ವನಿವರ್ಧಕ ಮತ್ತು ಈಜುಗಾರರರು ಒಳಗೊಂಡಂತೆ ಎನ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ. ಜತೆಗೆ, ಆ್ಯಂಬುಲೆನ್ಸ್ ವ್ಯವಸ್ಥೆ, ವೈದ್ಯರು ಮತ್ತು ಶುಶ್ರೂಷಕಿಯರನ್ನು ಪ್ರಾಥಮಿಕ ಚಿಕಿತ್ಸೆ ನೀಡಲು ನೇಮಿಸಲಾಗಿದೆ. ಬಿಬಿಎಂಪಿಯ ಎಲ್ಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಹೆಚ್ಚುವರಿ ಆ್ಯಂಬುಲೆನ್ಸ್ ಹಾಗೂ ವೈದ್ಯರ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
63 ಕಡೆ ಏಕಗವಾಕ್ಷಿಯಲ್ಲಿ ಅನುಮತಿ
ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಅನುಮತಿ ಪಡೆಯಲು ಬಿಬಿಎಂಪಿಯ 63 ಕಂದಾಯ ಉಪ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರಗಳಿಗೆ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲು ಸಲ್ಲಿಕೆಯಾಗುವ ಅರ್ಜಿಗಳನ್ನು ಈ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮತಿ ನೀಡಲಿದ್ದಾರೆ.
ವಾರ್ಡ್‌ವಾರು ಅಧಿಕಾರಿಗಳ ನೇಮಕ
ಗಣೇಶ ಚುತುರ್ಥಿ ಸಂದರ್ಭದಲ್ಲಿ ಜನರಿಗೆ ನೆರವಾಗಲು ಹಾಗೂ ಯಾವುದೇ ಗೊಂದಲಗಳ ಉಂಟಾಗದಿರಲು ಬಿಬಿಎಂಪಿಯ ಎಂಟೂ ವಲಯಗಳಿಗೆ ಒಬ್ಬರನ್ನು ಮೇಲುಸ್ತುವಾರಿಯಂತೆ 8 ಅಧಿಕಾರಿಯಗಳನ್ನು ನೇಮಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ಸಂಬಂಧಿಸಿದಂತೆ ಬಿಬಿಎಂಪಿಯ ಪ್ರತಿ ವಾರ್ಡ್‌ಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
ಪರಿಸರಸ್ನೇಹಿ ಗಣೇಶ ಪೂಜಿಸಿ
ಮಣ್ಣಿನ ಗಣಪನ ಪ್ರತಿಷ್ಠಾಪಿಸಿ ಪೂಜಿಸುವ ಜತೆಗೆ, ಪರಿಸರ ಸ್ನೇಹಿಯಾಗಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವಂತೆ ಸಾರ್ವಜನಿಕರಲ್ಲಿ ಬಿಬಿಎಂಪಿ ಮನವಿ ಮಾಡಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಬಕೇಟ್‌ನಲ್ಲಿ ನೀರು ತುಂಬಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆಗೊಳಿಸಿ. ನಂತರ ಬರುವ ಮಣ್ಣನ್ನು ಕೈತೋಟ, ಹೂವಿನ ಕುಂಡಗಳಿಗೆ ಬಳಸಬಹುದಾಗಿದೆ.ಕ್ರಿಮಿನಲ್ ಕೇಸ್
ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ವಸ್ತುಗಳನ್ನು ಬಳಸಿ ತಯಾರಿಸುವ, ಮಾರಾಟ ಮಾರುವವರಿಗೆ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ವಲಯವಾರು ಗಣೇಶ ಮೂರ್ತಿ ವಿಸರ್ಜನೆ ಮೊಬೈಲ್ ಟ್ಯಾಂಕ್ ಹಾಗೂ ಕಲ್ಯಾಣಿ ವಿವರ
ವಲಯಮೊಬೈಲ್ ಟ್ಯಾಂಕರ್‌ಕಲ್ಯಾಣಿ
ಪೂರ್ವ13801
ಪಶ್ಚಿಮ8401
ದಕ್ಷಿಣ4302
ಮಹದೇವಪುರ4014
ದಾಸರಹಳ್ಳಿ1901
ಬೊಮ್ಮನಹಳ್ಳಿ6005
ಆರ್‌ಆರ್‌ನಗರ7407
ಯಲಹಂಕ0410
ಒಟ್ಟು46241