ಗರ್ಭಿಣಿಯರು ಸೇರಿದಂತೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸ್ಕ್ಯಾನಿಂಗ್ ಸೇವೆ ಒದಗಿಸಲಾಗುವುದು. ಐದನೇ ತಿಂಗಳ ಗರ್ಭಿಣಿಯರ ಸ್ಕ್ಯಾನಿಂಗ್‌ಗೆ ಅಗತ್ಯವಿರುವ ಸುಧಾರಿತ ತಂತ್ರಜ್ಞಾನದ ಸೌಲಭ್ಯವನ್ನು ಸದ್ಯ ಹೊರಗಡೆ ಮಾಡಿಸಲಾಗುತ್ತಿದ್ದು, ಅದರ ವೆಚ್ಚವನ್ನು ಆಸ್ಪತ್ರೆವತಿಯಿಂದ ಭರಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಬೇಕಾದ ಅಗತ್ಯ ತಂತ್ರಜ್ಞಾನವನ್ನು ಆಸ್ಪತ್ರೆಯಲ್ಲೇ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ದುರಸ್ತಿಗೊಂಡ ಸ್ಕ್ಯಾನಿಂಗ್ ಯಂತ್ರ ಹಾಗೂ ಹೃದಯಾಘಾತದ ತುರ್ತು ಸಂದರ್ಭಗಳಲ್ಲಿ ಬಳಸುವ ಡೆಫಿಬ್ರಿಲೇಟರ್ ಘಟಕವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಹಲವು ವರ್ಷಗಳಿಂದ ಸ್ಕ್ಯಾನಿಂಗ್‌ ಯಂತ್ರ ಬಳಕೆಗೆ ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ರೇಡಿಯಾಲಜಿಸ್ಟ್ ವೈದ್ಯರ ನೇಮಕ ಹಾಗೂ ಯಂತ್ರದ ದುರಸ್ತಿ ಕುರಿತು ನಾನು ಶಾಸಕನಾದ ನಂತರ ಸರ್ಕಾರಕ್ಕೆ ನಿರಂತರವಾಗಿ ಮನವಿ ಮಾಡಲಾಗಿತ್ತು. ಇದೀಗ ಸ್ಕ್ಯಾನಿಂಗ್ ಯಂತ್ರದ ದುರಸ್ತಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ ಎಂದರು. ಗರ್ಭಿಣಿಯರು ಸೇರಿದಂತೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸ್ಕ್ಯಾನಿಂಗ್ ಸೇವೆ ಒದಗಿಸಲಾಗುವುದು. ಐದನೇ ತಿಂಗಳ ಗರ್ಭಿಣಿಯರ ಸ್ಕ್ಯಾನಿಂಗ್‌ಗೆ ಅಗತ್ಯವಿರುವ ಸುಧಾರಿತ ತಂತ್ರಜ್ಞಾನದ ಸೌಲಭ್ಯವನ್ನು ಸದ್ಯ ಹೊರಗಡೆ ಮಾಡಿಸಲಾಗುತ್ತಿದ್ದು, ಅದರ ವೆಚ್ಚವನ್ನು ಆಸ್ಪತ್ರೆವತಿಯಿಂದ ಭರಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಬೇಕಾದ ಅಗತ್ಯ ತಂತ್ರಜ್ಞಾನವನ್ನು ಆಸ್ಪತ್ರೆಯಲ್ಲೇ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಹೃದಯಾಘಾತ ಅಥವಾ ಎದೆನೋವಿನ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಡೆಫಿಬ್ರಿಲೇಟರ್ ಉಪಕರಣ ಅಳವಡಿಸಲಾಗಿದೆ. ಹೃದಯ ಬಡಿತ ಸ್ಥಗಿತಗೊಂಡಂತಹ ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಶಾಕ್ ಮೂಲಕ ಹೃದಯದ ಬಡಿತವನ್ನು ಪುನಃ ಪ್ರಾರಂಭಿಸಲು ಈ ಉಪಕರಣ ನೆರವಾಗಲಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ಸುಮಾರು 600ರಿಂದ 800 ಮಂದಿ ರೋಗಿಗಳು ಚಿಕಿತ್ಸೆಗೆ ಆಗಮಿಸುವ ಸಂದರ್ಭಗಳಿವೆ. ಇದಕ್ಕೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಇತರೆ ಸೌಲಭ್ಯಗಳನ್ನು ಹಂತ ಹಂತವಾಗಿ ಹೆಚ್ಚಿಸುವ ಅಗತ್ಯವಿದ್ದು, ಈ ಕುರಿತು ಆರೋಗ್ಯ ಸಚಿವರಿಗೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗಾಗಿ ವೈದ್ಯರು, ಸಿಬ್ಬಂದಿ ನಿರಂತರ ಶ್ರಮ ಪಡುತ್ತಿದ್ದಾರೆ. ಸಾರ್ವಜನಿಕರು ವಿನಾ ಕಾರಣ ಕಾರಣ ತೊಂದರೆ ಕೊಡಬಾರದು. ವಿವಿಧ ಸಂಘಟನೆಗಳು ಹಾಗೂ ಮಾಧ್ಯಮಗಳು ವೈದ್ಯರಿಗೆ ಸಹಕಾರ ನೀಡಬೇಕು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಅಗತ್ಯ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕಿಶೋರ್, ಕ್ರಾಫರ್ಡ್‌ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್, ತಜ್ಞ ವೈದ್ಯರಾದ ಡಾ. ನಿಶ್ಚಿತ, ಡಾ. ವೆಂಕಟೇಶ್, ಡಾ. ಹೇಮಂತ್ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.