ಭಾರತೀಯ ಡಿಜಿಟಲ್ ಮೀಡಿಯಾ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ನವಿ ಮುಂಬೈಯ ‘ಇ ಪ್ಲಸ್ ಇಂಟೆಲೆಕ್ಚುವಲ್ ಮೀಡಿಯಾ’ ಸಂಸ್ಥೆಯ ವತಿಯಿಂದ 4ನೇ ಆವೃತ್ತಿಯ ರಾಷ್ಟ್ರೀಯ ಸಹಕಾರಿ ಬ್ಯಾಂಕ್‌ಗಳ ಕಾರ್ನಿವಲ್ ಮತ್ತು ಐಕಾನಿಕ್ ಲೀಡರ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ನ.27 ಮತ್ತು 28ರಂದು ಹೈದರಾಬಾದ್‌ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು:

ಭಾರತೀಯ ಡಿಜಿಟಲ್ ಮೀಡಿಯಾ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ನವಿ ಮುಂಬೈಯ ‘ಇ ಪ್ಲಸ್ ಇಂಟೆಲೆಕ್ಚುವಲ್ ಮೀಡಿಯಾ’ ಸಂಸ್ಥೆಯ ವತಿಯಿಂದ 4ನೇ ಆವೃತ್ತಿಯ ರಾಷ್ಟ್ರೀಯ ಸಹಕಾರಿ ಬ್ಯಾಂಕ್‌ಗಳ ಕಾರ್ನಿವಲ್ ಮತ್ತು ಐಕಾನಿಕ್ ಲೀಡರ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ನ.27 ಮತ್ತು 28ರಂದು ಹೈದರಾಬಾದ್‌ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದೆ.

ದೇಶದಾದ್ಯಂತದ ನಗರ ಸಹಕಾರಿ ಬ್ಯಾಂಕ್‌ಗಳು, ರಾಜ್ಯ ಸಹಕಾರಿ ಬ್ಯಾಂಕ್‌ಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಪ್ರತಿನಿಧಿಗಳು ಭಾಗವಹಿಸಲಿರುವ ಈ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ 2026ನೇ ಸಾಲಿನ ಪ್ರತಿಷ್ಠಿತ ಐಕಾನಿಕ್ ಲೀಡರ್ಸ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ‘ವರ್ಷದ ಅತ್ಯುತ್ತಮ ಬ್ಯಾಂಕ್’ ಪ್ರಶಸ್ತಿಗೆ ಆಯ್ಕೆಯಾಗಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ಗಮನಾರ್ಹ ಪ್ರಗತಿ, ನಾವೀನ್ಯತೆ, ಸಾಂಸ್ಥಿಕ ಬೆಳವಣಿಗೆ, ಕಾರ್ಯಾಚರಣೆಯಲ್ಲಿನ ಶ್ರೇಷ್ಠತೆ ಹಾಗೂ ಜವಾಬ್ದಾರಿಯುತ ಬ್ಯಾಂಕಿಂಗ್ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರಥಮ ಬಾರಿಗೆ ಲಭಿಸಿದೆ.ರಾಜೇಂದ್ರ ಕುಮಾರ್‌ಗೆ ಬೆಸ್ಟ್ ಚೇರ್ಮನ್‌ ಪ್ರಶಸ್ತಿ:

ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕಳೆದ 32 ವರ್ಷಗಳಿಂದ ಸಾರ್ಥಕ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ‘ಸಹಕಾರ ರತ್ನ’ ಡಾ। ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ‘ಬೆಸ್ಟ್ ಚೇರ್ಮನ್’ ಪ್ರಶಸ್ತಿ ಲಭಿಸಿದೆ. ಎಸ್‌ಸಿಡಿಸಿಸಿ ಬ್ಯಾಂಕನ್ನು ಪ್ರಗತಿಯ ಉನ್ನತ ಶಿಖರಕ್ಕೇರಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಗೂ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದವರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಗ್ರಾಹಕರಿಗೆ ತ್ವರಿತ ಹಾಗೂ ಗುಣಮಟ್ಟದ ಸೇವೆ ಒದಗಿಸುವಲ್ಲಿ ಅವರ ದೂರದೃಷ್ಟಿಯ ನಾಯಕತ್ವ ಮಹತ್ವದ ಕೊಡುಗೆ ನೀಡಿದೆ.

ಸಹಕಾರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಸಾಧನೆಯ ಮೂಲಕ ಗುರುತಿಸಿಕೊಂಡಿರುವ ಅವರು ನವೋದಯ ಸ್ವಸಹಾಯ ಸಂಘಗಳ ಮೂಲಕ ಸಹಕಾರಿ ಚಳವಳಿಗೆ ಹೊಸ ಶಕ್ತಿ ತುಂಬಿದ ಮುಂಚೂಣಿ ನಾಯಕರಾಗಿದ್ದಾರೆ.

ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ, ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಚೈತನ್ಯ ತುಂಬುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿರುವುದು ಅವರ ಸಾಧನೆಯ ಪ್ರಮುಖ ಮೈಲಿಗಲ್ಲಾಗಿದೆ.

ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ಬಲವರ್ಧನೆಗೆ ನೀಡಿರುವ ಗಮನಾರ್ಹ ಕೊಡುಗೆ, ದೂರದೃಷ್ಟಿಯ ನಾಯಕತ್ವ, ಅತ್ಯುತ್ತಮ ಸಾಧನೆಗಳು ಹಾಗೂ ಶ್ರೇಷ್ಠತೆಗೆ ನೀಡಿರುವ ಆದ್ಯತೆಯನ್ನು ಪರಿಗಣಿಸಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಪ್ರತಿಷ್ಠಿತ ‘ಬೆಸ್ಟ್ ಚೇರ್ಮನ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನ. 27ರಂದು ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.