23 ರಂದು ಪರಿಶಿಷ್ಟ ಜಾತಿ ಸಮಾವೇಶ

| Published : Apr 22 2024, 02:16 AM IST

ಸಾರಾಂಶ

ಏ. 23ರಂದು ನಗರದ ಡಾ. ಅಂಬೇಡ್ಕರ್‌ ಭವನದಲ್ಲಿ ಪರಿಶಿಷ್ಟ ಜಾತಿ ಸಮಾವೇಶ ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಏ.23 ರಂದು ನಗರದ ಡಾ.ಅಂಬೇಡ್ಕರ್ ಭವನದಲ್ಲಿ ‘ಪರಿಶಿಷ್ಟ ಜಾತಿ ಸಮಾವೇಶ’ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ಎಚ್. ಎಂ. ನಂದಕುಮಾರ್ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾವೇಶದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ, ಕೊಡಗು-ಮೈಸೂರು ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ, ಜಿಲ್ಲೆಯ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದ ಅವರು ಪ್ರಧಾನಿ ಮೋದಿ ಅವರು ಅಚ್ಛೇ ದಿನ್ ಎನ್ನುತ್ತಲೆ ಬಡವರ್ಗವನ್ನೆ ನಿರ್ಮೂಲನ ಮಾಡುವ ಕೆಲಸ ಮಾಡುತ್ತಿದ್ದಾರೆ, ಪ್ರಸ್ತುತ ಕೇಂದ್ರ ಸರ್ಕಾರ ಆ‌‍ರ್‌ಎಸ್‌ಎಸ್ ಅಜೆಂಡಾದಂತೆ ಮುಂದುವರಿಯುತ್ತಿದೆ. ಈ ಬಾರಿ ನಾಲ್ಕು ನೂರಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಬಿಜೆಪಿ ಉದ್ದೇಶ ಕೇವಲ ಸಂವಿಧಾನವನ್ನು ಬದಲಾಯಿಸುವ ಚಿಂತನೆಯದ್ದಾಗಿದೆ ಎಂದು ಟೀಕಿಸಿದ ನಂದಕುಮಾರ್, ಸಂವಿಧಾನವನ್ನು ರಕ್ಷಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪರಿಶಿಷ್ಟರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿಕೊಂಡ ಬಿಜೆಪಿ ನೇತತ್ವದ ಸರ್ಕಾರ, ಇಲೆಕ್ಟ್ರಾಲ್ ಬಾಂಡ್‌ನಂತಹ ಬಹುದೊಡ್ಡ ಭ್ರಷ್ಟಾಚಾರ ಮಾಡಿದೆ. ದೇಶದ ಸಾಲದ ಪ್ರಮಾಣ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಒಟ್ಟಾಗಿ 50 ಲಕ್ಷ ಕೋಟಿ ರು. ಇತ್ತಾದರೆ, ಕಳೆದ ಹತ್ತು ವರ್ಷದ ಮೋದಿ ಅವಧಿಯಲ್ಲಿ ಈ ಪ್ರಮಾಣ 170 ಲಕ್ಷ ಕೋಟಿ ರು. ಗಳಿಗೆ ಏರಿದೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿದಲ್ಲಿ ನೆರೆಯ ಶ್ರೀಲಂಕಾದಂತೆ ಭಾರತ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಸಂರಕ್ಷಣೆಯೊಂದಿಗೆ ದೇಶವನ್ನು ಉಳಿಸಲು ಕಾಂಗ್ರೆಸ್ ಅನಿವಾರ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಮಾತನಾಡಿ, ಮೋದಿಯವರ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯ ಸರ್ಕಾರ ತಾನು ನೀಡಿದ್ದ ಐದು ಗ್ಯಾರಂಟಿಗಳನ್ನು ಪೂರೈಸಿದ್ದು, ಈ ಬಾರಿ ಜನತೆ ಕಾಂಗ್ರೆಸ್‌ಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಪ್ರಮುಖರಾದ ಮೋಹನ್ ಮೌರ್ಯ, ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಮುದ್ದುರಾಜ್ ಹಾಗೂ ಕಾಂಗ್ರೆಸ್ ಪರಿಶಿಷ್ಟ ನಗರ ಘಟಕದ ಪ್ರಮುಖರಾದ ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.