ಸಾರಾಂಶ
ಅಲೆಮಾರಿ ಸಮುದಾಯದ ಜನರಿಗೆ ಅರಿವು ಮೂಡಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಕ್ರಮ ವಹಿಸಿ.
ದೊಡ್ಡಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳು ಜಾರಿಗೊಳಿಸಿದ್ದು, ಅರ್ಹರಿಗೆ ಯೋಜನೆಗಳ ಸೌಲಭ್ಯ ಸಿಗುವಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಸೂಚಿಸಿದರು. ಬೆಂ.ಗ್ರಾ. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಡಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ನಿಗಮದ ವಿವಿಧ ಯೋಜನೆಗಳ ಕುರಿತ ಪೋಸ್ಟರ್ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಅಲೆಮಾರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ. ಜಾತಿ ಮತ್ತು ಪ.ಪಂಗಡ ನಿಗಮದಿಂದ ಹಲವು ಯೋಜನೆಗಳು ಜಾರಿಯಾಗಿದ್ದು ಭೂ ಒಡೆತನ ಯೋಜನೆ, ನಿವೇಶನ ಹಾಗೂ ಮನೆ ಸೌಲಭ್ಯ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಸಮಗ್ರ ಗಂಗಾ ಕಲ್ಯಾಣ ಯೋಜನೆ ಕಾರ್ಯಕ್ರಮಗಳಿದ್ದು ಇವುಗಳ ಬಗ್ಗೆ ಅಲೆಮಾರಿ ಸಮುದಾಯದ ಜನರಿಗೆ ಅರಿವು ಮೂಡಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಕ್ರಮ ವಹಿಸಿ ಎಂದರು.ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮ, ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಜಿ, ನಾರಾಯಣ, ರತ್ನಮ್ಮ, ಎಂ.ರವಿ, ಹನುಮಂತರಾಜು, ವೆಂಕಟೇಶ್, ನಾಲ್ಕು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಸಿಬ್ಬಂದಿ ಉಪಸ್ಥಿತರಿದ್ದರು.