ಸ್ಕಿಜೋಫ್ರೀನಿಯಾ ಗುಣಪಡಿಸುವ ಕಾಯಿಲೆ: ಡಾ.ಮಂಜುನಾಥ್

| Published : Jun 01 2024, 12:45 AM IST

ಸಾರಾಂಶ

ರಾಮನಗರ: ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆಯನ್ನು ಚಿತ್ತವಿಕಲತೆ, ಚಿತ್ತಚಂಚಲತೆ ಅಥವಾ ಮಾನಸಿಕ ಅಸ್ವಸ್ಥತೆ ಎಂದು ಗುರುತಿಸಲಾಗಿದ್ದು ಇಂತಹ ಸಮಸ್ಯೆಗಳುಳ್ಳ ವ್ಯಕ್ತಿಗಳನ್ನು ಗುರುತಿಸಿ ಆಪ್ತ ಸಮಾಲೋಚನೆಯಿಂದ ಆತ್ಮಸ್ಥೈರ್ಯ ತುಂಬಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಸಿ. ಮಂಜುನಾಥ್ ಹೇಳಿದರು.

ರಾಮನಗರ: ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆಯನ್ನು ಚಿತ್ತವಿಕಲತೆ, ಚಿತ್ತಚಂಚಲತೆ ಅಥವಾ ಮಾನಸಿಕ ಅಸ್ವಸ್ಥತೆ ಎಂದು ಗುರುತಿಸಲಾಗಿದ್ದು ಇಂತಹ ಸಮಸ್ಯೆಗಳುಳ್ಳ ವ್ಯಕ್ತಿಗಳನ್ನು ಗುರುತಿಸಿ ಆಪ್ತ ಸಮಾಲೋಚನೆಯಿಂದ ಆತ್ಮಸ್ಥೈರ್ಯ ತುಂಬಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಸಿ. ಮಂಜುನಾಥ್ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ವಿವಿಧ ಅಭಿವೃದ್ಧಿ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಮೃತ್ಯು ಸಂಭವ ಮತ್ತು ದೌರ್ಜನ್ಯ ಸಮಾಜದ ಇತರೆ ಕಾಯಿಲೆಗಳುಳ್ಳ ಜನರಲ್ಲಿ ಹೋಲಿಸಿದರೆ 2-3 ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ. ಆತ್ಮಹತ್ಯೆ ಪ್ರಕರಣ ಸಹ ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ 12 ಪಟ್ಟು ಅಧಿಕವಾಗಿ ಕಂಡುಬಂದಿದೆ. ತಾವೆಲ್ಲರೂ ಜಾಗೃತರಾಗಿ ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವವರಿಗೆ ಕುಟುಂಬದ ಸಹಕಾರ ಮತ್ತು ಆರೈಕೆಯಿಂದಾಗಿ ವ್ಯಕ್ತಿ ಬೇಗ ಚೇತರಿಸಿಕೊಳ್ಳುವಂತೆ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.

ಮನೋರೋಗ ತಜ್ಞ ಡಾ.ಎ.ಎಂ.ಆದರ್ಶ ಮಾತನಾಡಿ, ಸ್ಕಿಜೋಫ್ರೀನಿಯಾ ರೋಗಿಗಳಲ್ಲಿ ಯಾರಿಗೂ ಕಾಣದ ವಸ್ತುಗಳು ಮತ್ತು ವ್ಯಕ್ತಿಗಳು ಕಾಯಿಲೆ ಇರುವ ವ್ಯಕ್ತಿಗಳಿಗೆ ಮಾತ್ರ ಕಾಣಿಸುವುದು. ಯಾರಿಗೂ ಕೇಳಿಸದ ಶಬ್ಧಗಳು ಮತ್ತು ಧ್ವನಿಗಳು, ಮಾತುಗಳು ಕಾಯಿಲೆ ಇರುವ ವ್ಯಕ್ತಿಗೆ ಮಾತ್ರ ಕಾಣಿಸುತ್ತದೆ ಎಂದು ಹೇಳಿದರು.

ಅತಿ ಹೆಚ್ಚು ಅನಿಸುವಷ್ಟು ಅನುಮಾನ, ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕಡಿಮೆಯಾಗುವುದು ಅಥವಾ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಅರಿವೇ ಇಲ್ಲದಿರುವ ಸ್ಥಿತಿ ಮಾನಸಿಕ ಅಸ್ವಸ್ಥತೆ ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಹಾಗೂ ಪ್ರೌಢಾವಸ್ಥೆಯ ಆರಂಭದ ಸಮಯದಲ್ಲಿ ಕಂಡು ಬರುತ್ತದೆ. ಮಕ್ಕಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದರು.

ರೋಗ ಲಕ್ಷಣ ಸಾಮಾನ್ಯವಾಗಿ ವಾರಗಳ ಹಾಗೂ ತಿಂಗಳು ಕಳೆದಂತೆ ನಿಧಾನವಾಗಿ ಹೆಚ್ಚಾಗುತ್ತದೆ. ದಿನಕಳೆದಂತೆ ಭ್ರಮೆ, ತಪ್ಪು ಗ್ರಹಿಕೆ, ಗೊಂದಲದ ಯೋಚನೆಗಳು, ತರ್ಕ ಸಮಸ್ಯೆ, ಅಸಹಜ ನಡವಳಿಕೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಾರ್ವಜನಿಕರು ಇಂತಹ ವ್ಯಕ್ತಿಗಳು ಕಂಡು ಬಂದ ತಕ್ಷಣ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ರಾಜು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಿಎಲ್‌ಇ ಅಧಿಕಾರಿಗಳಾದ ಡಾ. ಸಿ.ಮಂಜುನಾಥ್, ಡಿಟಿಒ ಅಧಿಕಾರಿಗಳಾದ ಡಾ. ಕುಮಾರ್, ಡಿಎಂಒ ಅಧಿಕಾರಿಗಳಾದ ಡಾ. ಶಶಿಧರ್, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಿಬ್ಬಂದಿ ಪದ್ಮರೇಖಾ, ರಾಘವೇಂದ್ರ, ಪವಿತ್ರ, ಆರೋಗ್ಯ ಸಿಬ್ಬಂದಿ, ಅರೆ ವೈದ್ಯಕೀಯ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.30ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಡಾ.ಮಂಜುನಾಥ್ ಚಾಲನೆ ನೀಡಿದರು.