ಸಾರಾಂಶ
- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್‌ನಿಂದ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ವ ಧರ್ಮದ ಮಕ್ಕಳನ್ನು ಸಮಾನವಾಗಿ ಗುರುತಿಸಿ ಶಿಷ್ಯ ವೇತನ ನೀಡುವ ಕಾರ್ಯ ಶ್ಲಾಘನೀಯ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಎಲ್ಲಾ ಹಂತದಲ್ಲೂ ಟ್ರಸ್ಟ್ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಮಲ್ಲಂದೂರು ರಸ್ತೆ ಸಮೀಪದ ಸ್ಪೂರ್ತಿ ಸೌಧದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಳೆದ 18 ವರ್ಷಗಳಿಂದ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಬಡವರು ಹಾಗೂ ಲೋಕ ಕಲ್ಯಾಣಕ್ಕೆ ಧಾರ್ಮಿಕ, ಶೈಕ್ಷಣಿಕ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಸ್ವಸಹಾಯ ಸಂಘದಡಿ ಸಾಲ ಸೌಲಭ್ಯ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಿಟ್ಟು ಅಭ್ಯಾಸಿಸಬೇಕು. ಹಿಂದಿನ ಕಾಲದಲ್ಲಿ ಉತ್ತೀರ್ಣ ರಾದರೆ ಸಾಕಾಗಿತ್ತು. ಆದರೀಗ ಸ್ಪರ್ಧೆಗಳು ಹೆಚ್ಚಿವೆ. ಜೊತೆಗೆ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಪೂರ್ಣವಾಗಿ ಕೈಜೋಡಿಸಿದ ಕಾರಣ ಬಡವರು ಮಕ್ಕಳು ವಿದ್ಯಾಭ್ಯಾಸ ಪೂರೈಸಿ ಇಂದು ಉನ್ನ ತ ಅಧಿಕಾರಿಗಳಾಗಿದ್ದಾರೆ ಎಂದು ಹೇಳಿದರು.ಗ್ರಾಮಾಭೀವೃದ್ಧಿ ಯೋಜನೆ ಸೌಲಭ್ಯ ಪಡೆದುಕೊಂಡಿರುವ ಫಲಾನುಭವಿಗಳು ದುಂದು ವೆಚ್ಚಗಳಿಗೆ ಹಣ ವ್ಯಯಿಸದೇ, ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಗಳಿಗೆ ಬಳಸಿಕೊಂಡಲ್ಲಿ ಧರ್ಮಾಧಿಕಾರಿಗಳ ಸದುದ್ದೇಶ ಈಡೇರಿದಂತಾಗುತ್ತದೆ ಅಲ್ಲದೇ ಸಮಾಜದ ಮುನ್ನೆಲೆಗೆ ಬರಲು ಸಾಧ್ಯವಾಗಲಿದೆ ಎಂದರು.ಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ದುಶ್ಚಟ ಅಥವಾ ಆಮಿಷಕ್ಕೆ ಒಳಗಾಗದೇ ತಪ್ಪಿನ ನಿರ್ಧಾರ ಕೈಗೊಳ್ಳದಿರಿ. ವಿದ್ಯೆ ಎಂಬ ತಪಸ್ಸನ್ನು ಸಂಪೂರ್ಣಗೊಳಿಸಿದರೆ ಜೀವನವೆಂಬ ಬಂಡಿ ಸುಲಭವಾಗಿ ಎಳೆಯಬಹುದು. ಹೀಗಾಗಿ ಪಾಲಕರ ಕನಸು ನನಸುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಕಳೆದ 16 ವರ್ಷಗಳಿಂದ ತಾಲೂಕಿನಲ್ಲಿ ಸುಮಾರು 857 ವಿದ್ಯಾರ್ಥಿಗಳಿಗೆ ₹1.26 ಕೋಟಿ ರು. ಗಳಷ್ಟು ಸುಜ್ಞಾನ ನಿಧಿ ಶಿಷ್ಯ ವೇತನ ವಿತರಿಸಲಾಗಿದೆ. ಕುಡಿತದಿಂದ ದಾಸರಾದ 1500ಕ್ಕೂ ಹೆಚ್ಚು ಮಂದಿಗೆ ಮದ್ಯವರ್ಜನ ಶಿಬಿರ ಆಯೋಜಿಸಿ ಬಡವರ ಬದುಕನ್ನು ಶ್ರೀಮಂತಗೊಳಿಸಲಾಗಿದೆ ಎಂದು ಹೇಳಿದರು.ಯೋಜನಾಧಿಕಾರಿ ರಮೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ 158 ವಿದ್ಯಾರ್ಥಿಗಳನ್ನು ಗುರುತಿಸಿ ಸುಜ್ಞಾನ ನಿಧಿ ಶಿಷ್ಯವೇತನ ವಿತರಿಸಲಾಗಿದೆ. ಜೊತೆಗೆ ಗ್ರಾಮಸ್ಥರ ಸಹಕಾರದಿಂದ 16 ಕೆರೆಗಳ ಹೂಳು ತೆಗೆಯಲಾಗಿದೆ. 18 ದೇವಾಲಯಗಳನ್ನು ಸಂಪೂರ್ಣವಾಗಿ ಜೀರ್ಣೋದ್ದಾರ ಹಾಗೂ ವಿಶೇಷಚೇತನ ಮಕ್ಕಳಿಗೆ ಉಚಿತವಾಗಿ ಪರಿಕರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅನಿಲ್ ಆನಂದ್, ಎಸ್‌ಡಿಎಂ ಮಂಜು, ದಶರಥ ರಾಜ್ ಅರಸ್, ನಜ್ಮಾ ಆಲಿ, ಕುಮಾರ್ ಶೆಟ್ಟಿ, ಮುಖಂಡ ಕೋಟೆ ಮಲ್ಲೇಶ್, ಯೋಜನಾಧಿಕಾರಿ ರೂಪಾ ಚೈನ್ ಉಪಸ್ಥಿತರಿದ್ದರು. 3 ಕೆಸಿಕೆಎಂ 3ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ ಸಮೀಪದ ಸ್ಫೂರ್ತಿ ಸೌಧದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನಿಂದ ನಡೆದ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.