ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ವಿದ್ಯಾರ್ಥಿಗಳಲ್ಲಿ ಅಡಗಿರುವ ಶೈಕ್ಷಣೇತರ ಚಟುವಟಿಕೆಗಳನ್ನು ಪ್ರದರ್ಶಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿ ಹೊರ ಹೊಮ್ಮುತ್ತದೆ ಎಂದು ಮಲ್ನಾಡ್ ಪ್ರೌಢಶಾಲೆ ಸಂಘದ ಅಧ್ಯಕ್ಷ ಎನ್. ಕೆ. ಶ್ಯಾಮರಾವ್ ತಿಳಿಸಿದರು.ಕೆ. ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮದಲ್ಲಿರುವ ಶ್ರೀಮತಿ ಶಾರದಾ ಕೆ. ಎನ್. ರಾಜಶೇಖರ್ ಪ್ರೌಢಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸಾಮರ್ಥ್ಯವನ್ನು ಶಿಕ್ಷಕರು ಮತ್ತು ಪೋಷಕರು ಗಮನಿಸಿ, ಅವರಲ್ಲಿರುವ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹಿಸಬೇಕು. ಸಂಸ್ಥೆ ಅತ್ಯುತ್ತಮ ಸೌಲಭ್ಯ ಹೊಂದಿರುವುದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.ಬಿಜೆಪಿ ಮುಖಂಡರಾದ ಪ್ರತಿಬಾ ಮಂಜುನಾಥ್, ಮಕ್ಕಳು ಬಾಲ್ಯದಿಂದ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಲಿಯಬೇಕು. ಇದರಿಂದ ಧೈರ್ಯದ ಜೊತೆಗೆ ಬುದ್ಧಿಶಕ್ತಿ ಬೆಳೆಯುತ್ತದೆ. ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಶಿಸ್ತನ್ನು ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆ ಕಾರ್ಯದರ್ಶಿ ಪಿ. ಎಸ್. ಮೋಹನೇಶ್ವರ, ಮಕ್ಕಳು ಹೆಚ್ಚು ಸಮಯವನ್ನು ಶಾಲೆಯಲ್ಲಿ ಕಳೆಯುವುದರಿಂದ, ಮಕ್ಕಳಿಗೆ ಪಠ್ಯದ ಜೊತೆ ಪಠೈತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಶಿಕ್ಷಕರು ಪ್ರೋತ್ಸಾಹಿಸಬೇಕು. ಕಡ್ಡಾಯವಾಗಿ ದೈಹಿಕ ಶಿಕ್ಷಣದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವಕುಮಾರ್, ಸಂಸ್ಥೆ ಉಪಾಧ್ಯಕ್ಷ ಎನ್. ಬಿ. ಉದಯಕುಮಾರ್, ಎಸ್. ವಿ. ರುದ್ರಪ್ಪ, ಕೆ. ಎ. ಕೊಟ್ಟೂರಪ್ಪ, ನಿರ್ದೇಶಕರಾದ ಮಧುಸೂದನ್, ರುದ್ರೇಶ್ ಕಾಡ್ಲೂರು, ಎಚ್. ಎಚ್. ಸದಾನಂದ್ ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
;Resize=(128,128))
;Resize=(128,128))
;Resize=(128,128))
;Resize=(128,128))