ಸಾರಾಂಶ
ಏಕಾಏಕಿ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿಯ ಪದರು ಉದುರಿ ಬಿದ್ದ ಪರಿಣಾಮ ಶಾಲೆಯ ಹೊರಗಡೆ ಮಲಗಿಕೊಂಡಿದ್ದ ವ್ಯಕ್ತಿಯೊರ್ವನಿಗೆ ಗಾಯಗಳಾದ ಘಟನೆ ಶಾರದಾಳ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕಲಾದಗಿ
ಏಕಾಏಕಿ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿಯ ಪದರು ಉದುರಿ ಬಿದ್ದ ಪರಿಣಾಮ ಶಾಲೆಯ ಹೊರಗಡೆ ಮಲಗಿಕೊಂಡಿದ್ದ ವ್ಯಕ್ತಿಯೊರ್ವನಿಗೆ ಗಾಯಗಳಾದ ಘಟನೆ ಶಾರದಾಳ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.ಎಂದಿನಂತೆ ಮಂಗಳವಾರ ಶಾಲಾ ಅವಧಿ ಮುಗಿದು ಮಕ್ಕಳು ಮನೆಗೆ ತೆರಳಿದ್ದಾರೆ. ರಾತ್ರಿ ಹೊತ್ತು ಗ್ರಾಮಸ್ಥರು, ಯುವಕರು ಶಾಲಾ ಹೊರಗಡೆ ಮಲಗಿದ್ದಾರೆ. ಏಕಾಏಕಿ ಚಾವಣಿಯ ಸಿಮೆಂಟ್ ಪದರ ಉದುರಿ ಅಲ್ಲಿಯ ಮಗಿದ್ದ ಗ್ರಾಮದ ಸವಳ್ಯಪ್ಪ ಬೈಲಪ್ಪ ಹಾವೇರಿ(೬೦) ಎಂಬುವವರು ಮೇಲೆ ಬಿದ್ದಿದೆ. ಹೀಗಾಗಿ ಈ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಕಲಾದಗಿ ಭಾಗದಲ್ಲಿ ಕಳೆದ ಕೆಲ ದಿನದಿಂದ ಮಳೆ ಸುರಿಯುತ್ತಿದೆ. ಚಾವಣಿಯ ನೀರು ಸರಾಗವಾಗಿ ಹರಿದು ಹೋಗದೇ ನಿಂತು ಹೋಗುತ್ತಿದೆ. ನೀರು ನಿಂತು ಸಿಮೆಂಟ್ ಪದರ ನೆನೆದು ಉಬ್ಬಿ ಬಂದು ರಾತ್ರಿ ವೇಳೆಯಲ್ಲಿ ಬಿದ್ದಿದೆ ಎನ್ನಲಾಗಿದೆ. ಆದರೆ, ಇದೇ ಘಟನೆ ಶಾಲೆಯ ಅವಧಿಯಲ್ಲಿ ಆಗಿದ್ದರೆ ಅನಾಹುತವೇ ಸಂಭವಿಸುತ್ತಿತ್ತು. ದುರಸ್ತಿ ಶಾಲೆಗಳ ಬಗ್ಗೆ ಈ ಹಿಂದೆ ಕನ್ನಡಪ್ರಭ ಸರಣಿ ವರದಿಗಳನ್ನು ಪ್ರಕಟಿಸಿ ಶಿಕ್ಷಣ ಇಲಾಖೆಯನ್ನು, ಸಂಬಂಧಿಸಿದ ಅಧಿಕಾರಿ ವರ್ಗವನ್ನು ಎಚ್ಚರಿಸಿದೆ. ಆದರೆ, ಅಧಿಕಾರಿಗಳು ಮಾತ್ರ ಎಚ್ಚರಗೊಂಡಿಲ್ಲ. ಇನ್ನಾದರೂ ದುರಸ್ತಿ ಶಾಲೆಗಳತ್ತ ಗಮನ ಹರಿಸುವುದು ಒಳ್ಳೆಯದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.