ಕನ್ನಡಪ್ರಭವಾರ್ತೆ ತುರುವೇಕೆರೆ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೋಮವಾರದಿಂದ ಪ್ರಾರಂಭವಾದ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಪೋಷಕರು, ಶಿಕ್ಷಕರು ತಮ್ಮ ಶಾಲಾ ಮಕ್ಕಳನ್ನು ಬಹಳ ಸಡಗರ ಸಂಭ್ರಮದಿಂದ ಬರಮಾಡಿಕೊಂಡರು. ಹಲವಾರು ಶಾಲೆಗಳಲ್ಲಿ ರಂಗೋಲಿ ಹಾಕಿ, ಮಕ್ಕಳಿಗೆ ಹೂವು ನೀಡುವ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು. ಪಟ್ಟಣದ ಪಿ ಎಂ ಎಸ್ ಆರ್ ಐ ನ ಸರ್ಕಾರಿ ಮಾದರಿ ಶಾಲೆಯ ಮಕ್ಕಳನ್ನು ಬ್ಯಾಂಡ್ ಸೆಟ್ ನೊಂದಿಗೆ ಶಾಲೆಗೆ ಬರಮಾಡಿಕೊಳ್ಳಲಾಯಿತು. ಶಾಲೆಗೆ ಆಗಮಿಸಿದ ಎಲ್ಲಾ ಮಕ್ಕಳಿಗೆ ಸಿಹಿಯೂಟ ಬಡಿಸಿ ಸಂಭ್ರಮಿಸಲಾಯಿತು. ನೂತನ ಶೈಕ್ಷಣಿಕ ವರ್ಷಕ್ಕೆ ಕಾಲಿಡುತ್ತಿರುವ ತಾಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸೋಮಶೇಖರ್ ಆತ್ಮೀಯ ಸ್ಚಾಗತವನ್ನು ಕೋರಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2026- 27ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು. ತಾಲೂಕಿನ ಕಿರಿಯ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಸರ್ಕಾರಿ ಪ್ರೌಢಶಾಲೆ, ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ರಹಿತ ಪ್ರಾಥಮಿಕ ಪಾಠಶಾಲೆಯಲ್ಲಿ ಹಬ್ಬದೋಪಾದಿಯಲ್ಲಿ ಮಕ್ಕಳನ್ನು ಶಾಲೆಗಳಿಗೆ ಬರ ಮಾಡಿಕೊಳ್ಳಲಾಯಿತು. ನೂತನ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಆಗಮಿಸಿದ ಮಕ್ಕಳನ್ನು ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು. ಕೆಲವು ಶಾಲೆಗಳಲ್ಲಿ ದ್ವಾರಕ್ಕೆ ತಳಿರು ತೋರಣ ಮತ್ತು ಬಾಳೆಯ ಕಂದುಗಳನ್ನು ಕಟ್ಟಲಾಗಿತ್ತು. ಶಾಲೆಯ ಆವರಣವನ್ನು ಶುಚಿಯಾಗಿಡಲಾಗಿತ್ತು. ಕೆಲ ಶಾಲೆಗಳಲ್ಲಿ ಬಣ್ಣ ಬಣ್ಣದ ಬಲೂನ್ ನೀಡಿದರು. ಇನ್ನೂ ಹಲವು ಶಾಲೆಗಳಲ್ಲಿ ಮಕ್ಕಳು ಮತ್ತು ಪೋಷಕರನ್ನು ಬ್ಯಾಂಡ್ ಸೆಟ್ ಬಡಿಯುವ ಮೂಲಕ ಅಕ್ಕರೆಯಿಂದ ಸ್ವಾಗತಿಸಲಾಯಿತು. ಶಾಲೆಗೆ ಬಂದಿದ್ದ ಪ್ರತಿಯೊಂದು ಮಕ್ಕಳಿಗೂ ಪಠ್ಯ ಪುಸ್ತಕ ವಿತರಿಸಲಾಯಿತು.
ಈ ವರ್ಷದಿಂದಲೇ ತಾಲೂಕಿನ 13 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲಾಗಿದೆ. 1 ರಿಂದ 5 ನೇ ತರಗತಿವರೆಗೆ ದ್ವಿಭಾಷಾ ನೀತಿಯನ್ನು ಸರ್ಕಾರ ಜಾರಿ ಮಾಡಿದೆ. ಮೊದಲನೇ ಮತ್ತು ಎರಡನೇ ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ತುರುವೇಕೆರೆ ಫಲಿತಾಂಶ ಜಿಲ್ಲೆಗೆ ಮೊದಲ ಸ್ಥಾನದಕ್ಕಿದೆ ಎಂದು ಬಿಇಒ ಎನ್. ಸೋಮೇಶೇಖರ್ ಸಂತಸ ವ್ಯಕ್ತಪಡಿಸಿದರು. ಮುಖ್ಯಶಿಕ್ಷಕರಾದ ಬಸವರಾಜು ಇದ್ದರು.