ಬಸವನಹಳ್ಳಿ ಶಾಲೆಯಲ್ಲಿ ಶಾಸಕ ಎಚ್‌.ಡಿ.ತಮ್ಮಯ್ಯ, ಎಸ್‌.ಎಲ್‌.ಭೋಜೇಗೌಡ ಪ್ರತಿ ವಿದ್ಯಾರ್ಥಿಗಳಿಗೆ ಸಿಹಿ, ಗುಲಾಬಿ ಹೂ ನೀಡಿ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬೇಸಿಗೆ ರಜೆ ಮುಗಿಸಿ ಅತ್ಯಂತ ಹುರುಪಿನಿಂದ ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆ ಪ್ರಾರಂಭದ ದಿನ ಸೋಮವಾರ ಶಿಕ್ಷಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರೀತಿಯಿಂದ ಬರಮಾಡಿಕೊಂಡರು.

ಚಿಕ್ಕಮಗಳೂರು ನಗರದ ಬಸವನಹಳ್ಳಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಡಿ.ತಮ್ಮಯ್ಯ ಹಾಗೂ ಎಸ್‌.ಎಲ್‌.ಭೋಜೇಗೌಡ ಪ್ರತಿ ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಗುಲಾಬಿ ಹೂ ನೀಡಿ ಬರಮಾಡಿಕೊಂಡರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್ಲ ಮೂಲ ಸೌಲಭ್ಯ, ನುರಿತ ಶಿಕ್ಷಕರಿದ್ದಾರೆ. ವಿದ್ಯಾರ್ಥಿ ಗಳಿಗೆ ಉತ್ತಮ ವಿದ್ಯಾಭ್ಯಾಸ ದೊರಕಲಿದ್ದು, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಸರ್ಕಾರ ಎಲ್ಲ ಸೌಲಭ್ಯ ಕಲ್ಪಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ನಡುವೆಯೂ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆತು ಉತ್ತಮ ಫಲಿತಾಂಶ ಬರುತ್ತಿದೆ ಎಂದರು.ಪೋಷಕರಲ್ಲಿ ತಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆಂಬ ಕೀಳರಿಮೆ ಕಿಂಚಿತ್ತೂ ಬರಬಾರದು. ಸರ್ಕಾರಿ ಶಾಲೆ ಗಳಲ್ಲಿ ಅಭ್ಯಾಸ ಮಾಡಿದವರೇ ಇಂದು ಉನ್ನತ ಹುದ್ದೆಗಳಲ್ಲಿರುವುದನ್ನು ಕಾಣುತ್ತಿದ್ದೇವೆ. ಉದಾಹರಣೆಗೆ ಎಂಎಲ್‌ಸಿ ಎಸ್.ಎಲ್. ಭೋಜೇಗೌಡರು ಸರ್ಕಾರಿ ಶಾಲೆಗಳಲ್ಲೇ ಓದಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ನಾನು ಸರ್ಕಾರಿ ಶಾಲೆಯಲ್ಲೇ ಓದಿ ಇಂದು ಶಾಸಕನಾಗಿದ್ದೇನೆ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ಶಾಲೆ ಪ್ರಾರಂಭವಾಗುವ ದಿನಗಳಲ್ಲಿ ಪ್ರತಿ ವರ್ಷ ಮಕ್ಕಳನ್ನು ಸ್ವಾಗತಿಸಲು ಒಂದೊಂದು ಶಾಲೆಯನ್ನು ಆಯ್ಕೆ ಮಾಡುತ್ತೇವೆ. ಈ ಬಾರಿ ಬಸವನಹಳ್ಳಿ ಶಾಲೆ ಆಯ್ಕೆ ಮಾಡಿದ್ದು, ಶಿಕ್ಷಕರು ಅಷ್ಟೇ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮ್ಮ ಆದ್ಯ ಕರ್ತವ್ಯ. ಮಕ್ಕಳಲ್ಲಿ ಕಲಿಯುವ ಆಸಕ್ತಿ ಇರಬೇಕು. ಇದಕ್ಕೆ ಪ್ರೋತ್ಸಾಹ ನೀಡುವುದೇ ಉದ್ದೇಶ ಎಂದರು.ಶಾಲಾಭಿ ವೃದ್ಧಿ ಮಂಡಳಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಉಪಸ್ಥಿತರಿದ್ದರು.


-- ಬಾಕ್ಸ್‌----

ಮಕ್ಕಳ ಶಾಲಾ ಹಾಜರಾತಿ ಬಗ್ಗೆ ನಿಗಾ ವಹಿಸಿ: ಜಿಲ್ಲಾಧಿಕಾರಿ

ಮಕ್ಕಳು ಪ್ರತಿದಿನ ತಪ್ಪದೆ ಶಾಲೆಗೆ ಹಾಜರಾಗಬೇಕು. ಶಿಕ್ಷಣದಲ್ಲಿ ನಿರಂತರತೆ ಅತ್ಯಂತ ಮುಖ್ಯ. ಪೋಷಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಕರೆ ನೀಡಿದರು.ನಗರದ ಬೇಲೂರು ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಶಾಲಾ ಪ್ರಾರಂಭೋತ್ಸವ’ ಉದ್ಘಾಟಿಸಿ ಮಾತನಾಡಿ ಶಾಲೆಗಳು ಪುನರಾರಂಭಗೊಂಡಿವೆ. ಮಕ್ಕಳಿಗೆ ಸಾಂಕೇತಿಕವಾಗಿ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಗಿದೆ. ಸೋಮವಾರದಿಂದಲೇ ಬಿಸಿಯೂಟ ಯೋಜನೆ ಕೂಡ ಆರಂಭ ವಾಗಲಿದೆ. ಮುಂದಿನ ದಿನಗಳಲ್ಲಿ ಶೂ ಮತ್ತು ಸಾಕ್ಸ್‌ ವಿತರಿಸಲಾಗುವುದು. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗಬೇಕಾದ ಎಲ್ಲಾ ಸೌಲಭ್ಯ ತಲುಪಿಸಲಾಗುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಈ ಶಾಲೆ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯಾಗುತ್ತಿದ್ದು, ಸರ್ಕಾರದಿಂದ ಕೆಲವು ಕಾರ್ಯಕ್ರಮ ಬಾಕಿ ಇವೆ. ಇದು ಕೆಪಿಎಸ್ ಶಾಲೆ ಆಗುವುದರಿಂದ ಶಾಲೆ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಇನ್ನಷ್ಟು ಉತ್ತಮಗೊಳ್ಳಲಿದೆ. ಈ ನಿಟ್ಟಿನಲ್ಲಿ ಶ್ರಮಿಸಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಮನವಿ ಮಾಡಿದರು.ಪ್ರತಿದಿನ ಶಾಲೆಗೆ ಬರುವುದರಿಂದ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯ. ಕೇವಲ ಪಠ್ಯ ಓದು ವುದಷ್ಟೇ ಅಲ್ಲದೆ, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸ್ಪಷ್ಟತೆ ಇರಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಯಾವುದಾದರೂ ಸಂಶಯಗಳಿದ್ದರೆ ಶಿಕ್ಷಕರನ್ನು ಮುಕ್ತವಾಗಿ ಪ್ರಶ್ನಿಸಿ ಪರಿಹರಿಸಿಕೊಳ್ಳಬೇಕು ಎಂದರು.ಶಾಲೆಗಳಲ್ಲಿ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕ ಕ್ರೀಡೆಗಳು, ಚರ್ಚಾ ಸ್ಪರ್ಧೆಗಳಂತಹ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಾಗಿ ಆಯೋಜಿಸಿದರೆ ಮಕ್ಕಳಲ್ಲಿ ಏಕತಾನತೆ ತಪ್ಪಿಸುತ್ತದೆ. ಇದರೊಂದಿಗೆ ಶಾಲಾ ಹಂತದಲ್ಲಿ ರಕ್ತ ಹೀನತೆ ತಡೆಗಟ್ಟಲು ಬಿಸಿಯೂಟದಲ್ಲಿ ಪೌಷ್ಟಿಕ ತರಕಾರಿಗಳು, ಸೊಪ್ಪು ಹಾಗೂ ನುಗ್ಗೆಸೊಪ್ಪನ್ನು ಹೆಚ್ಚಾಗಿ ಬಳಸಬೇಕು. ಪೌಷ್ಟಿಕಾಂಶದಿಂದ ಮಕ್ಕಳ ಗ್ರಹಣ ಸಾಮರ್ಥ್ಯ ಮತ್ತು ದೈಹಿಕ ಬೆಳವಣಿಗೆ ಉತ್ತಮವಾಗಿ ವಾರ್ಷಿಕ ಪರೀಕ್ಷೆಗಳಲ್ಲಿ ಶಾಲೆಗೆ ಅತ್ಯುತ್ತಮ ಫಲಿತಾಂಶ ದೊರೆಯಲಿದೆ ಎಂದು ಆಶಿಸಿದರು.ಜಿಪಂ ಸಿಇಒ ಕೀರ್ತನಾ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸು ಕಾಣಬೇಕು. ಆ ಕನಸುಗಳನ್ನು ನನಸಾ ಗಿಸಲು ಶ್ರದ್ಧೆ ಹಾಗೂ ಭಕ್ತಿಯಿಂದ ವಿದ್ಯಾಭ್ಯಾಸ ಮಾಡಬೇಕು. ಸರ್ಕಾರ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಹಾಗೂ ಹಾಲಿನ ಸೌಲಭ್ಯ ನೀಡುತ್ತಿದೆ. ಇವೆಲ್ಲವನ್ನೂ ಉಚಿತವಾಗಿ ನೀಡುತ್ತಿರುವುದು ಸರ್ಕಾರಕ್ಕೆ ನಿಮ್ಮಿಂದ ಹಣ ಬೇಕು ಎಂದಲ್ಲ. ನೀವೆಲ್ಲರೂ ಚೆನ್ನಾಗಿ ಓದಿ, ದೇಶಪ್ರೇಮಿ ಮತ್ತು ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂಬ ಏಕೈಕ ಉದ್ದೇಶದಿಂದ ಎಂದು ತಿಳಿಸಿದರು.ನಾವು ಡಾಕ್ಟರ್, ಸೈಂಟಿಸ್ಟ್, ಐಎಎಸ್ ಅಧಿಕಾರಿಗಳು ಮಾತ್ರವಲ್ಲ, ಪ್ರಧಾನಮಂತ್ರಿಯಾಗುವ ದೊಡ್ಡ ಕನಸು ಕಾಣಬೇಕು. ನಮ್ಮ ಕನಸು ನನಸಾಗಿಸಲು ಇಡೀ ಸಮಾಜ, ಪೋಷಕರು ಹಾಗೂ ಶಿಕ್ಷಕರು ಸದಾ ಬೆಂಬಲ ನೀಡುತ್ತಾರೆ ಎಂದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು, ವಿಷಯ ಪರಿವೀಕ್ಷಕ ಕಾಂತರಾಜು ಉಪಸ್ಥಿತರಿದ್ದರು.

-- ಕೋಟ್‌--

ಪೋಷಕರು ತಮ್ಮ ಮಕ್ಕಳನ್ನು ವರ್ಷದಲ್ಲಿ ಕನಿಷ್ಠ 220 ದಿನಗಳ ಕಾಲ ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತೀರ್ಣಗೊಳಿಸುವ ಜವಾಬ್ದಾರಿ ಶಿಕ್ಷಕರದು.

ರುದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಚಿಕ್ಕಮಗಳೂರು-- ಬಾಕ್ಸ್‌ --

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒತ್ತಾಯವಾಗಿ ವರ್ಗಾವಣೆ ಪತ್ರ

ಖಾಸಗಿ ಶಾಲೆಗಳಲ್ಲಿ ತಮ್ಮ ಶಾಲೆಯ ಶೇ.100 ರಷ್ಟು ಫಲಿತಾಂಶ ಪ್ರದರ್ಶಿಸುವ ಹಪಾಹಪಿಗೆ ಬಿದ್ದು, ಕಲಿಕೆಯಲ್ಲಿ ಹಿಂದುಳಿದ ಹಾಗೂ ಅನುತ್ತೀರ್ಣರಾದ ಮಕ್ಕಳನ್ನು ಗುರುತಿಸಿ ಅವರಿಗೆ ಬಲವಂತವಾಗಿ ವರ್ಗಾವಣೆ ಪತ್ರ ನೀಡಿ ಸರ್ಕಾರಿ ಶಾಲೆಗಳಿಗೆ ಕಳುಹಿಸುವ ತಂತ್ರ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಯಿತು.

ಈ ಬಾರಿ ಅಂತಹ ಸುಮಾರು 50ಕ್ಕೂ ಹೆಚ್ಚು ಪ್ರವೇಶಾತಿ ಅರ್ಜಿಗಳನ್ನು ಕಟ್ಟುನಿಟ್ಟಾಗಿ ತಿರಸ್ಕರಿಸಲಾಗಿದೆ. ಒಂಬತ್ತು ವರ್ಷ ಗಳ ಕಾಲ ದುಬಾರಿ ಶುಲ್ಕ ಪಡೆದ ಖಾಸಗಿ ಶಾಲೆಗಳೇ ಆ ಮಕ್ಕಳ ಜವಾಬ್ದಾರಿ ಹೊರಬೇಕು ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ವಾಪಸ್ ಕಳುಹಿಸಲಾಗಿದೆ.

ಪೋಷಕರು ಮಕ್ಕಳಿಗೆ 8ನೇ ತರಗತಿಯಲ್ಲೇ ನಮ್ಮ ಸರ್ಕಾರಿ ಶಾಲೆಗೆ ಪ್ರವೇಶ ಕೊಡಿಸಿದರೆ 2 ವರ್ಷಗಳಲ್ಲಿ ಅವರನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ನಾವು ಸಿದ್ಧಪಡಿಸುತ್ತೇವೆ ಎಂದು ಶಿಕ್ಷಣ ಇಲಾಖೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕಟ್ಟುನಿಟ್ಟಿನ ಸೂಚನೆಯಂತೆ ಜಿಲ್ಲೆಯಲ್ಲಿ ’ಭದ್ರ ಬಾಲ್ಯ’ ಕಾರ್ಯಕ್ರಮದಡಿ ಯಾವುದೇ ಒಂದು ಮಗು ಕೂಡ ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯ ರೂಪಿಸಲು ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದೆ. ಪೋಷಕರು ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕು ಎಂದು ವಿನಂತಿಸಿದರು.ಫೋಟೋ-1

ಬಸವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂಕೊಟ್ಟು ಶಾಸಕ ಎಚ್‌.ಡಿ.ತಮ್ಮಯ್ಯ ಸ್ವಾಗತಿಸಿದರು. ಈ ವೇಳೆ ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ. ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಇದ್ದರು.

ಫೋಟೋ 2

ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಶಾಲಾ ಪ್ರಾರಂಭೋತ್ಸವ’ವನ್ನು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಉದ್ಘಾಟಿಸಿದರು. ಜಿಪಂ ಸಿಇಒ ಕೀರ್ತನಾ, ಡಿಡಿಪಿಐ ತಿಮ್ಮರಾಜು ವಿಷಯ ಪರಿವೀಕ್ಷಕ ಕಾಂತರಾಜು ಇದ್ದರು.