ಶಾಲಾ ಪ್ರಾರಂಭೋತ್ಸವ: ಜೂ.1 ರಿಂದ ದಾಖಲಾತಿ ಆಂದೋಲನ

| Published : Jun 01 2024, 12:46 AM IST

ಸಾರಾಂಶ

ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಂ.ಚಂದ್ರಕಾಂತ್‌ ಬೋಯಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದ್ದಾರೆ. ಜೂ.1ರಿಂದ 15 ರ ವರೆಗೆ ಶಾಲಾ ದಾಖಲಾತಿ ಆಂದೋಲನ ನಡೆಯಲಿದೆ ಎಂದು ಈ ಸಂದರ್ಭ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಾರಂಭೋತ್ಸವ ಶುಕ್ರವಾರ ನಡೆದಿದೆ. ಶಾಲೆಗಳಲ್ಲಿ ತಳಿರು ತೋರಣ ಕಟ್ಟಿ, ಗುಲಾಬಿ ಹೂವು ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಂ.ಚಂದ್ರಕಾಂತ್‌ ಬೋಯಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದ್ದಾರೆ. ಜೂ.1ರಿಂದ 15 ರ ವರೆಗೆ ಶಾಲಾ ದಾಖಲಾತಿ ಆಂದೋಲನ ನಡೆಯಲಿದ್ದು, ಅರ್ಹ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಮನೆ ಮನೆಗೆ ಭೇಟಿ ನೀಡಿ, ಶಾಲೆಗೆ ಮಕ್ಕಳನ್ನು ಸೇರಿಸುವಲ್ಲಿ ಶಾಲಾ ದಾಖಲಾತಿ ಆಂದೋಲನ ನಡೆಯಲಿದೆ ಎಂದು ತಿಳಿಸಿದರು.

ಶಾಲಾ ಆವರಣ, ಶಾಲಾ ಕೊಠಡಿ ಹಾಗೂ ಶೌಚಾಲಯ ಸ್ವಚ್ಛತೆ, ಸಂಪು, ಟ್ಯಾಂಕ್ ಸ್ವಚ್ಛತೆ, ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡುವುದು, ಆಹಾರ ಧಾನ್ಯಗಳ ವ್ಯವಸ್ಥೆ ಮತ್ತಿತರವನ್ನು ಪರಿಶೀಲಿಸಿದರು.

ಶಾಲೆ ಆರಂಭವಾದ ಶುಕ್ರವಾರ ಮಧ್ಯಾಹ್ನ ಬಿಸಿಯೂಟದಲ್ಲಿ ಪಾಯಸ ಬಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ತರಗತಿಗಳು ನಡೆಯಲಿವೆ. ಸೇತುಬಂಧ ಚಟುವಟಿಕೆ ಮತ್ತು ಮೂಲ ಕಲಿಕಾಂಶ ಆಧಾರಿತ ಕಲಿಕೆ ಅನುಷ್ಠಾನಗೊಳಿಸಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ಅಭಿವೃದ್ಧಿ ಪಡಿಸಿ ಕಲಿಕಾ ಅಂತರ ನೀಗಿಸಲು ಸಲಹೆ ಮಾಡಲಾಗಿದೆ ಎಂದರು.

ಶಿಕ್ಷಕರಿಗೆ ಶೈಕ್ಷಣಿಕ ಮಾರ್ಗದರ್ಶಿಯಂತೆ ಪಾಠ ಪ್ರವಚನ ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣಾಧಿಕಾರಿ ಎಂ.ಮಹದೇವಸ್ವಾಮಿ ಕುಶಾಲನಗರ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 479 ಪ್ರಾಥಮಿಕ ಶಾಲೆಗಳು ಮತ್ತು 171 ಪ್ರೌಢಶಾಲೆಗಳು ಇವೆ ಎಂದು ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ.