ಬಿಸಿಯೂಟ ಅಡುಗೆಯವರು ಶುಚಿ, ರುಚಿ ಆಹಾರ ತಯಾರಿಕೆಗೆ ಆದ್ಯತೆ ನೀಡಬೇಕು: ಪ್ರಶಾಂತ ಶೆಟ್ಟಿ

| Published : Jan 08 2024, 01:45 AM IST

ಬಿಸಿಯೂಟ ಅಡುಗೆಯವರು ಶುಚಿ, ರುಚಿ ಆಹಾರ ತಯಾರಿಕೆಗೆ ಆದ್ಯತೆ ನೀಡಬೇಕು: ಪ್ರಶಾಂತ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಶ್ರಯದಲ್ಲಿ ಅಕ್ಷರದಾಸೋಹ ಅಡುಗೆ ಸಿಬ್ಬಂದಿಗೆ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ಆಹಾರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಬಿಸಿಯೂಟ ಅಡುಗೆ ಸಿಬ್ಬಂದಿ ಶುಚಿ ಮತ್ತು ರುಚಿಯಾದ ಆಹಾರ ತಯಾರಿಕೆಗೆ ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.

- ಗುರುಭವನದಲ್ಲಿ ಅಡುಗೆ ಸಿಬ್ಬಂದಿಗೆ ತರಬೇತಿ, ಆಹಾರ ಮೇಳ ಉದ್ಘಾಟನೆ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಿಸಿಯೂಟ ಅಡುಗೆ ಸಿಬ್ಬಂದಿ ಶುಚಿ ಮತ್ತು ರುಚಿಯಾದ ಆಹಾರ ತಯಾರಿಕೆಗೆ ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.

ಗುರು ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಶ್ರಯದಲ್ಲಿ ಅಕ್ಷರದಾಸೋಹ ಅಡುಗೆ ಸಿಬ್ಬಂದಿಗೆ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ಆಹಾರ ಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮ ಜಾರಿಗೆ ತಂದರು. ನಂತರದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.

ಬಿಸಿಯೂಟ ಅಡುಗೆ ಸಿಬ್ಬಂದಿಗೆ ಸರ್ಕಾರ ಗೌರವಧನ ನೀಡುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಓದುವ ಬಡವರ್ಗದ ಮಕ್ಕಳಿಗೆ ಬಿಸಿಯೂಟ ಸಿಬ್ಬಂದಿ ಉತ್ತಮ ಆಹಾರ ತಯಾರಿಸಿ ನೀಡುವ ಮೂಲಕ ಮನೆಯಲ್ಲಿ ತಾಯಿ ಮಾಡುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದಾ ಮಾತನಾಡಿ, ಬಿಸಿಯೂಟ ಅಡುಗೆ ಸಿಬ್ಬಂದಿ ಕಡಿಮೆ ಗೌರವಧನ ಪಡೆದರೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಅಡುಗೆ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಎಸ್ಸೆಸ್ಸೆಲ್ಸಿ ಶಿಕ್ಷಣ ಕಡ್ಡಾಯಮಾಡಿದೆ. ಆದರೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವುದೇ ಸಮಸ್ಯೆಯಾಗದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ಶಿಕ್ಷಣ ಇಲಾಖೆಯಲ್ಲಿ ಬಿಸಿಯೂಟ ಕಾರ್ಯಕ್ರಮದಡಿ ಅಳವಡಿಸಿಕೊಳ್ಳುವ ಹೊಸ ವಿಚಾರಗಳ ಬಗ್ಗೆ ಅರಿವು ಮೂಡಿಸಲು 5 ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಕೊನೆ ತರಬೇತಿ ನೀಡುವಾಗ ಅಡುಗೆ ಸಿಬ್ಬಂದಿ ನಡುವೆ ಸ್ಪರ್ಧೆಗಾಗಿ ಆಹಾರ ಮೇಳ ಆಯೋಜಿಸಲಾಗುತ್ತದೆ ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಧನಂಜಯ ಮೇಧೂರ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ,ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಾಲತೇಶ್ ತರಬೇತಿ ನೀಡಿದರು.

ಆಹಾರ ಸ್ಪರ್ಧೆಯಲ್ಲಿ ಬಸ್ತಿಮಠದ ಸರ್ಕಾರಿ ಶಾಲೆಯ ರೂಪ,ಲತಾ,ಲಕ್ಷ್ಮಿ ಪ್ರಥಮ. ಕಲ್ಲುಗುಡ್ಡೆ ಶಾಲೆಯ ಸುಜಾತ, ಮಂಜುಳಾ ದ್ವಿತೀಯ, ಪೇಟೆ ಶಾಲೆಯ ರೆಹಮತ್ ಮತ್ತು ತಂಡ ತೃತೀಯ ಬಹುಮಾನ ಪಡೆದರು. ನಾಲ್ಕು ಶಾಲೆಯವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಆಹಾರ ಮೇಳದಲ್ಲಿ ಮನೆಯಲ್ಲಿ ತಯಾರಿಸಿದ ಬಗೆ,ಬಗೆಯ ತಿಂಡಿ,ತಿನಿಸುಗಳನ್ನು ಪ್ರದರ್ಶಿಸಲಾಯಿತು.

ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಸದಸ್ಯೆ ಸುರಯ್ಯಭಾನು, ಅಕ್ಷರ ದಾಸೋದ ತಾಲೂಕು ನೋಡಲ್ ಅಧಿಕಾರಿ ಪರಶುರಾಮಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಸೇವ್ಯಾ ನಾಯಕ್, ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತಾ,ಅನ್ನಪೂರ್ಣ ಪಾಲ್ಗೊಂಡಿದ್ದರು.