ಉತ್ತಮ ನಾಯಕತ್ವದಿಂದ ಮಾತ್ರ ಶಾಲೆ, ಸಂಸ್ಥೆ ಅಭಿವೃದ್ಧಿ ಹೊಂದಲು ಸಾದ್ಯ. ಈ ದಿಸೆಯಲ್ಲಿ ಸಿದ್ದಲಿಂಗೇಶ್ವರ ಶಾಲೆ ಸಾಕ್ಷಿಯಾಗಿದ್ದು, ಮುಖ್ಯ ಶಿಕ್ಷಕರ ಪ್ರಾಮಾಣಿಕ ಕಾಳಜಿ, ಪರಿಶ್ರಮ ಹಾಗೂ ಸದುದ್ದೇಶದಿಂದ ಸರ್ಕಾರಿ ಶಾಲೆ ಖಾಸಗಿ ಶಾಲೆಗೆ ಸಮಾನವಾಗಿ ಗುರುತಿಸಿಕೊಂಡು ಮಾದರಿಯಾಗಿದೆ ಎಂದು ಎಲ್ ಎಸ್ ಇ ಜಿ ಮತ್ತು ಯೂತ್ ಫಾರ್ ಸೇವಾ ಸಂಸ್ಥೆಯ ನಿರ್ದೇಶಕರಾದ ಸರೋಜಾ ಶಾನುಭೋಗ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಉತ್ತಮ ನಾಯಕತ್ವದಿಂದ ಮಾತ್ರ ಶಾಲೆ, ಸಂಸ್ಥೆ ಅಭಿವೃದ್ಧಿ ಹೊಂದಲು ಸಾದ್ಯ. ಈ ದಿಸೆಯಲ್ಲಿ ಸಿದ್ದಲಿಂಗೇಶ್ವರ ಶಾಲೆ ಸಾಕ್ಷಿಯಾಗಿದ್ದು, ಮುಖ್ಯ ಶಿಕ್ಷಕರ ಪ್ರಾಮಾಣಿಕ ಕಾಳಜಿ, ಪರಿಶ್ರಮ ಹಾಗೂ ಸದುದ್ದೇಶದಿಂದ ಸರ್ಕಾರಿ ಶಾಲೆ ಖಾಸಗಿ ಶಾಲೆಗೆ ಸಮಾನವಾಗಿ ಗುರುತಿಸಿಕೊಂಡು ಮಾದರಿಯಾಗಿದೆ ಎಂದು ಎಲ್ ಎಸ್ ಇ ಜಿ ಮತ್ತು ಯೂತ್ ಫಾರ್ ಸೇವಾ ಸಂಸ್ಥೆಯ ನಿರ್ದೇಶಕರಾದ ಸರೋಜಾ ಶಾನುಭೋಗ್ ಅಭಿಪ್ರಾಯಪಟ್ಟರು.ಪಟ್ಟಣದ ದೊಡ್ಡಪೇಟೆಯ ಶ್ರೀ ಸಿದ್ದಲಿಂಗೇಶ್ವರ ಶಾಲೆಯಲ್ಲಿ ಎಲ್ಎಸ್ಇಜಿ ಮತ್ತು ಯೂತ್ ಫಾರ್ ಸೇವಾ ಸಂಸ್ಥೆ ಕೊಡುಗೆಯಾಗಿ ನೀಡಿದ ಇಂಟ್ರಾಕ್ಟಿವ್ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ನ ಟಿವಿ ಹಾಗೂ ಕಂಪ್ಯೂಟರ್ ಶಿಕ್ಷಣಕ್ಕೆ ಚಾಲನೆ ನೀಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಉತ್ತಮ ಕೆಲಸ ಮಾಡುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಸಹೋದ್ಯೋಗಿಗಳ ಜತೆ ಸೇರಿ ಖಾಸಗಿ ಶಾಲೆಗೆ ಸಮಾನ ರೀತಿಯಲ್ಲಿ ಅಭಿವೃದ್ಧಿಪಡಿಸುವಲ್ಲಿ ಜೀವನವನ್ನು ಮುಡುಪಾಗಿಟ್ಟಿರುವ ಮುಖ್ಯ ಶಿಕ್ಷಕ ಜಬಿವುಲ್ಲಾರನ್ನು ಅಭಿನಂದಿಸುವುದಾಗಿ ತಿಳಿಸಿ, ಉತ್ತಮ ಸಂಸ್ಕಾರ, ಸೌಲಭ್ಯದಿಂದ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿಯಾಗಿದ್ದು, ಮುಖ್ಯ ಶಿಕ್ಷಕರ ಅಪಾರವಾದ ಕಾಳಜಿ, ಪರಿಶ್ರಮದಿಂದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಎಂದು ಬಣ್ಣಿಸಿದರು.ಮುಖ್ಯ ಶಿಕ್ಷಕ ಜಬಿವುಲ್ಲಾ ಮಾತನಾಡಿ, ಹಿಂದೆ ವಿದ್ಯೆ ಕಲಿತವನು ವಿದ್ಯಾವಂತ ಕಲಿಯದವ ಅವಿದ್ಯಾವಂತ ಎಂಬುದು ಸಾಮಾನ್ಯ ಸಂಗತಿಯಾಗಿದ್ದು, ಇಂದು ಜಗತ್ತಿನಲ್ಲಿ ತಂತ್ರಜ್ಞಾನದ ಅರಿವಿಲ್ಲದವ ಅವಿದ್ಯಾವಂತರಾಗಿದ್ದು, ಅಂತಹ ಅವಿದ್ಯಾವಂತರನ್ನು ವಿದ್ಯಾವಂತರಾಗಿಸಲು ಪರೋಪಕಾರದ ಈ ಸಂಸ್ಥೆ ತನ್ನ ತಂಡದೊಂದಿಗೆ ಮಕ್ಕಳಿಗೆ ಪ್ರಾರಂಭದಿಂದಲೇ ತಾಂತ್ರಿಕತೆಯ ಅರಿವನ್ನು ಮೂಡಿಸಿ ಉತ್ತೇಜಿಸಲು ಶಾಲೆಗೆ ಯಂತ್ರೋಪಕರಣಗಳನ್ನು ನೀಡಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದು ತಿಳಿಸಿದರು.
ಶಾಲೆಯಲ್ಲಿ ಯಂತ್ರೋಪಕರಣದ ಕೊರತೆಯನ್ನು ನೀಗಿಸಿದ ಈ ಸಂಸ್ಥೆ ದೇವರ ಪ್ರತಿರೂಪವಾದ ಮಕ್ಕಳ ಕಲಿಕೆಗೆ ಹೆಚ್ಚಿನ ಸಹಕಾರ ನೀಡಿದಂತಾಗಿದೆ. ಜಗತ್ತಿನಲ್ಲಿ ಮೋಕ್ಷ ಸಿಗುವ ದಾನ ಯಾವುದಾದರೂ ಇದ್ದರೆ ಅದುವೇ ಪರೋಪಕಾರ ದಾನ ಅದನ್ನು ಈ ತಂಡ ಮಾಡಿ ಮೋಕ್ಷಕ್ಕೆ ಒಳಗಾಗಿದೆ ಎಂದು ಸಂಸ್ಥೆಯ ಸಂಚಾಲಕ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.ಪೋಷಕರು ಸರ್ಕಾರಿ ಶಾಲೆಯ ಸಮವಸ್ತ್ರದ ಬಗ್ಗೆ ಕೀಳರಿಮೆ ತೋರಿದಾಗ ದಾನಿಗಳಿಂದ ಪೋಷಕರ ಮನ ಗೆಲ್ಲುವ ಸಮವಸ್ತ್ರಗಳನ್ನು ಮಕ್ಕಳಿಗೆ ನೀಡಿದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಎಲ್ಲಾ ಕಾರ್ಯಕ್ಕೆ ಸಹ ಶಿಕ್ಷಕರು ಪೋಷಕರು ಹಾಗೂ ಎಸ್ ಡಿ ಎಂ ಸಿ ಸಮಿತಿಯ ಸಹಕಾರ ಇಂದಿನ ಅಭಿವೃದ್ಧಿಗೆ ಪೂರಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಎಸ್ಇಜಿ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯ ದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ನಾಗರಾಜಪ್ಪ, ಸಂಸ್ಥೆಯ ವಿಜಯ, ಶ್ರೀಕಾಂತ್, ಯಶವಂತ್, ಉಮೇಶ್, ರವಿಶಂಕರ್, ಮಂಜುನಾಥ್, ಹರೀಶ್, ಅಶೋಕ್ ಮಾರವಳ್ಳಿ ಪೋಷಕರು, ಶಾಲಾ ಸಮಿತಿ ಸದಸ್ಯರು, ಶಿಕ್ಷಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.