ಸಾರಾಂಶ
ಮಂಡ್ಯ: ಸಿನಿಮಾ ಚಿತ್ರೀಕರಣಕ್ಕಾಗಿ ವಿದ್ಯಾದೇಗುಲವನ್ನು ಕಾರಾಗೃಹವಾಗಿ ಬದಲಾವಣೆ ಮಾಡಿದ ಚಿತ್ರತಂಡದವರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಸ್ವರೂಪವನ್ನೇ ಬದಲಾಯಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಗರದ ಬಾಲಕಿಯರ ಪದವಿಪೂರ್ವ ಕಾಲೇಜ (ಕಲ್ಲು ಕಟ್ಟಡ) ಲ್ಲಿ ಜುಡೀಷಿಯಲ್ ಕಸ್ಟಡಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣಕ್ಕಾಗಿ ಕಾಲೇಜಿನ ಧ್ವಜಸ್ತಂಭವನ್ನೇ ತುಂಡರಿಸಲಾಗಿದೆ. ಕಟ್ಟಡದ ಕಿಟಕಿ- ಬಾಗಿಲುಗಳನ್ನೆಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಚಿತ್ರೀಕರಣ ಮಾಡಬೇಕೆಂದಿದ್ದರೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಮಾಡಬೇಕು. ಚಿತ್ರೀಕರಣಕ್ಕೆ ಅನುಮತಿ ನೀಡುವಾಗಲೂ ಕಾಲೇಜಿನ ಆಸ್ತಿಗೆ ಧಕ್ಕೆಯಾಗದಂತೆ ಚಿತ್ರೀಕರಣ ಮಾಡುವಂತೆ ಸಂಬಂಧಿಸಿದ ಶಿಕ್ಷಣ ಇಲಾಖೆಯವರು ಚಿತ್ರತಂಡದವರಿಗೆ ಸೂಚನೆ ನೀಡಬೇಕಿತ್ತು. ಚಿತ್ರೀಕರಣ ಮುಗಿಯುವವರೆಗೆ ಮೇಲುಸ್ತುವಾರಿ ವಹಿಸುವಂತೆ ಸಂಬಂಧಿಸಿದ ಶಿಕ್ಷಕರನ್ನು ನಿಯೋಜಿಸಬೇಕಿತ್ತು. ಇದರ ನಡುವೆಯೂ ಚಿತ್ರತಂಡದವರು ಧ್ವಜಸ್ತಂಭವನ್ನು ತುಂಡರಿಸಿ, ಕಿಟಕಿ- ಬಾಗಿಲುಗಳನ್ನೆಲ್ಲಾ ಬದಲಾವಣೆ ಮಾಡಿದ್ದರೆ ಚಿತ್ರೀಕರಣಕ್ಕೆ ಅನುಮತಿ ನೀಡಿರುವ ಶಿಕ್ಷಣ ಇಲಾಖೆಯವರೇ ಜವಾಬ್ದಾರರಾಗಿರುತ್ತಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಜರುಗಿಸಿ ಸಿನಿಮಾ ಚಿತ್ರೀಕರಣ ಸ್ಥಗಿತಗೊಳಿಸುವಂತೆ ಹಾಗೂ ಆಗಿರುವ ನಷ್ಟಕ್ಕೆ ಚಿತ್ರತಂಡದಿಂದ ಪರಿಹಾರ ಕೊಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.