ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂದಿರ, ಮಸೀದಿ, ಚರ್ಚುಗಳಲ್ಲಿ ಕಾಣದ ಭಾರತವನ್ನು ತರಗತಿಯ ಒಳಗೆ ನೋಡಬಹುದು ಎಂದು ಚಿಂತಕ ಡಾ.ಬಿ.ಎಲ್. ರಾಜು ಅಭಿಪ್ರಾಯಪಟ್ಟರು.ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಹಯೋಗದಲ್ಲಿ ದೊಡ್ಡ ಮತ್ತಲಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಎಸ್. ಕೆ. ಗಾಯತ್ರಿ ಮತ್ತು ಕೆ. ರಾಮಚಂದ್ರ ಸ್ಥಾಪಿಸಿರುವ ದಿ. ಜಯಮ್ಮ ಮತ್ತು ಆಡಗಡಿ ಕರಿಯಪ್ಪ ಸ್ಮಾರಕ ದತ್ತಿ ಆಶಯದಂತೆ, ‘ಸಂವಿಧಾನದ ಆಶಯಗಳು ಈ ಹೊತ್ತಿನ ಭಾರತ’ ವಿಚಾರವಾಗಿ ಮಾತನಾಡಿದರು.
ನಮ್ಮ ನಡುವೆ ಅನೇಕ ತಾರತಮ್ಯಗಳಿವೆ. ಮಸೀದಿ, ಮಂದಿರ, ಚರ್ಚುಗಳಲ್ಲಿ ಇಲ್ಲದ ಸಮಾನತೆಯನ್ನು, ನಾವು ಕಾಣುವ ಒಂದೇ ಒಂದು ಜಾಗವೆಂದರೆ ಅದು ತರಗತಿಯ ಕೊಠಡಿಗಳು ಮಾತ್ರ. ಇಲ್ಲಿ ಎಲ್ಲರೂ ಜೊತೆಯಾಗಿ ಬೆಂಚುಗಳ ಮೇಲೆ ಕುಳಿತು ಕಲಿಯುತ್ತೇವೆ ಎಂದ ಅವರು, ಮನುಷ್ಯ ಇನ್ನೊಬ್ಬ ಮನುಷ್ಯನನ್ನು ನೋಡುವ ರೀತಿಯೇ ಸಂವಿಧಾನದ ಆಶಯ ಎಂದು ವಿಶ್ಲೇಷಿಸಿದರು.ಮತ್ತೋರ್ವ ದತ್ತಿ ದಾನಿಗಳಾದ ಸಂದೇಶ ಉಪಾಧ್ಯ ಅವರು, ತಮ್ಮ ತಂದೆ ಶಂಕರನಾರಾಯಣ ಉಪಾದ್ಯ ಸ್ಮರಣೆಯಲ್ಲಿ ಸ್ಥಾಪಿಸಿರುವ, ‘ಸಮಾಜ ಸೇವೆಯಲ್ಲಿ ಯುವಜನರ ಪಾತ್ರ’ ಕುರಿತು ದಾವಣಗೆರೆ ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿಗಳಾದ ಡಾ. ಎಚ್. ಆರ್. ತಿಪ್ಪೇಸ್ವಾಮಿ ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು. ದೇಶದ ಪ್ರಗತಿಗೆ ಕಾರಣರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ಕಸಾಪ ದತ್ತಿ ಕಾರ್ಯಕ್ರಮಗಳ ಮೂಲಕ ಹೊಸ ತಲೆಮಾರಿಗೆ ಸಮಕಾಲೀನ ಜೀವನ ಮೌಲ್ಯ, ವೈಚಾರಿಕ ಚಿಂತನೆಗಳನ್ನು ಬಿತ್ತುವ ಆಶಯ ಹೊಂದಿದೆ. ಅದೇ ರೀತಿ ಎನ್.ಎಸ್. ಎಸ್. ಚಿಂತನೆಗಳು ಮಹಾತ್ಮ ಗಾಂಧಿ ಅವರ ಕನಸಾದ ಬಹುತ್ವ ಭಾರತದ ಕನಸಾಗಿದೆ. ನಾವು ನಮ್ಮ ಭಾಷೆಯನ್ನು ಕಲಿತು ಆ ಮೂಲಕ ದೇಶವನ್ನು, ವಿಶ್ವವನ್ನು ಗ್ರಹಿಸುವುದು ಒಳ್ಳೆಯದು ಎಂದು ವಿವರಿಸಿದರು.
ದತ್ತಿ ದಾನಿಗಳಾದ ಕೆ. ರಾಮಚಂದ್ರ ಮಾತನಾಡಿ, ನಾವು ನೀಡಿದ ದತ್ತಿಯ ಮೂಲಕ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಸಂವಿಧಾನದ ಆಶಯ ಕುರಿತು ಕೇಳಿಸಲು ಸಾಧ್ಯವಾಗಿದ್ದಕ್ಕೆ ಕಸಾಪ ಅಧ್ಯಕ್ಷರನ್ನು ಅಭಿನಂದಿಸುವೆ. ನನಗೆ ಅತ್ಯಂತ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ವೀಣಾ ವಸಂತ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಜಿ. ಆರ್. ಲವ, ಎಂ. ಎಂ. ಸ್ವಾಮಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಯರಾದ ಪೃಥ್ವಿ ಸ್ವಾಗತಿಸಿ, ಎನ್. ಸಾರೀಕಾ ನಿರೂಪಿಸಿ, ಈಶ್ವರಿ ವಂದಿಸಿದರು.