ಶಾಲೆಗಳು ವ್ಯವಹಾರ ಕೇಂದ್ರಗಳಲ್ಲ: ಹೈಕೋರ್ಟ್‌

| Published : Oct 06 2023, 12:08 PM IST

ಸಾರಾಂಶ

ಸರಿಯಾದ ಕೊಠಡಿ ವ್ಯವಸ್ಥೆ, ಕ್ರೀಡಾ ಮೈದಾನ, ಪ್ರಯೋಗಾಲಯ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳಿಲ್ಲದಿದ್ದರೂ ಶಾಲೆಯನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದ 2 ಖಾಸಗಿ ಶಾಲೆಗಳನ್ನು ಹೈಕೋರ್ಟ್‌ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿತು. ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ. ಅಪ್ರಾಪ್ತ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ ಎಂದು ಕೆಂಡಕಾರಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು ಸರಿಯಾದ ಕೊಠಡಿ ವ್ಯವಸ್ಥೆ, ಕ್ರೀಡಾ ಮೈದಾನ, ಪ್ರಯೋಗಾಲಯ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳಿಲ್ಲದಿದ್ದರೂ ಶಾಲೆಯನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿದ್ದ ಎರಡು ಖಾಸಗಿ ಶಾಲೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ. ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದೆ ಶಾಲೆ ನಡೆಸಿ, ಅಪ್ರಾಪ್ತ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ ಎಂದು ಕೆಂಡಕಾರಿದೆ. ಖಾಸಗಿ ಶಾಲೆಯೊಂದು ಸಲ್ಲಿಸಿದ್ದ ಸಿವಿಲ್​ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರ ಶಾಲೆಗಳನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಶಾಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲದ ಕಾರಣ ಮೇಲ್ದರ್ಜೆಗೇರಿಸಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಸರ್ಕಾರಿ ಪ್ರಾಧಿಕಾರಗಳ ಕ್ರಮ ದುರುದ್ದೇಶಪೂರಿತವಾಗಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು. ------- ಇದಕ್ಕೂ ಮುನ್ನ ಅರ್ಜಿದಾರ ಶಾಲೆಗಳ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿದ ಹೈಕೋರ್ಟ್‌, ಶಾಲಾ ಕಟ್ಟಡ ಇದ್ದರೂ ಮಕ್ಕಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಕ್ರೀಡಾ ಮೈದಾನ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ತಡೆಗೋಡೆ ಇಲ್ಲ. ಮೇಲಾಗಿ ಅಗ್ನಿ ಸುರಕ್ಷತೆ ಕ್ರಮಗಳನ್ನು ಅಳವಡಿಸಿ, ನಿರಾಕ್ಷೇಪಣಾ ಪತ್ರ ಪಡೆದುಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಲೆ ನಡೆಸಲು ಅಥವಾ ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ಹೇಗೆ ಸಾಧ್ಯ ಎಂದು ಚಾಟಿ ಬೀಸಿತು. ಅಗ್ನಿ ಸುರಕ್ಷತೆ ಕ್ರಮಗಳು ಇಲ್ಲದಿದ್ದರೆ ಶಾಲೆ ನಡೆಸಲು ಅನುಮತಿ ನೀಡಿ, ಮುಂದೆ ಯಾವುದಾದರೂ ಅಹಿತಕರ ಘಟನೆ ನಡೆದು ಅಪ್ರಾಪ್ತ ಮಕ್ಕಳ ಜೀವಕ್ಕೆ ಅಪಾಯ ಉಂಟಾದರೆ, ಅದರ ಜವಾಬ್ದಾರಿ ಯಾರು ಹೊರಬೇಕು? ಮಕ್ಕಳ ಜೀವಕ್ಕೆ ಯಾವ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಿದೆ? ಮಕ್ಕಳನ್ನು ಅಪಾಯದ ಪರಿಸ್ಥಿತಿಗೆ ತಳ್ಳಲು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿ ಇರುವಾಗ ಅನುಮತಿ ನೀಡಲು ಸರ್ಕಾರಿ ಪ್ರಾಧಿಕಾರಗಳಿಗೆ ಸೂಚಿಸುವಂತೆ ನ್ಯಾಯಾಲಯವನ್ನು ಕೋರುವ ಕ್ರಮವನ್ನು ಸಹಿಸಲಾಗದು ಎಂದು ನ್ಯಾಯಪೀಠ ಕೋಪದಿಂದ ನುಡಿಯಿತು. ಅಂತಿಮವಾಗಿ ಶಾಲೆ ಕಟ್ಟಡದ ಸ್ಥಳವನ್ನು ಪರಿವರ್ತನೆಯನ್ನೂ ಮಾಡಿಲ್ಲ. ಹಾಗಾಗಿ, ಶಾಲೆಯನ್ನು ಮೇಲ್ದರ್ಜೆಗೆ ಏರಿಸಲು ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಸರ್ಕಾರದ ಪ್ರಾಧಿಕಾರಗಳು ತಿಳಿಸಿರುವ ಕ್ರಮ ಸರಿಯಾಗಿದೆ. ಅಗತ್ಯವಿದ್ದರೆ ಶಾಲೆಯನ್ನು ಮೇಲ್ದರ್ಜೆಗೇರಿಸಲು ಭೂ ಪರಿವರ್ತನೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿ ಅನುಮತಿ ಪಡೆಯಬಹುದು ಎಂದು ನ್ಯಾಯಪೀಠ ಶಾಲೆಗಳಿಗೆ ಸೂಚಿಸಿತು.