ಸಾರಾಂಶ
ಮಕ್ಕಳಿಗೆ ಉಚಿತವಾಗಿ ನೀಡುವ ಸಮವಸ್ತ್ರ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಗಳಿಗೆ ತಲುಪಿದ್ದು, ಶಾಲೆಗಳಿಗೆ ಹಂಚಿಕೆಯಾಗಬೇಕಿದೆ.
ಕಾರವಾರ: ಸುದೀರ್ಘ ೨ ತಿಂಗಳ ಬೇಸಿಗೆ ರಜೆಯ ಬಳಿಕ ಇಂದಿನಿಂದ(ಬುಧವಾರ) ಪ್ರಾಥಮಿಕ, ಪ್ರೌಢಶಾಲೆಗಳ ಬಾಗಿಲು ತೆರೆದುಕೊಳ್ಳಲಿದ್ದು, ಮಕ್ಕಳು ಶಾಲೆಗೆ ಆಗಮಿಸಲು ಉತ್ಸುಕರಾಗಿದ್ದಾರೆ. ಶಿಕ್ಷಕರು ಕೂಡಾ ಹಳೆ ವಿದ್ಯಾರ್ಥಿಗಳ ಜತೆಗೆ ಹೊಸದಾಗಿ ಶಾಲೆಗೆ ಸೇರ್ಪಡೆಗೊಳ್ಳುವ ಮಕ್ಕಳನ್ನು ಸ್ವಾಗತಿಸಲು ಸನ್ನದ್ಧರಾಗಿದ್ದಾರೆ. ಕಾರವಾರ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳು ಬರಲಿದೆ. ಈ ಎಲ್ಲ ಕಡೆ ಸರ್ಕಾರಿ ಅದೇಶದಂತೆ ಬುಧವಾರ(ಮೇ೨೯)ದಂದು ಶಾಲಾ ಕೊಠಡಿ, ಆವಾರ, ಅಡುಗೆ ಮನೆ, ಆಹಾರ ಧಾನ್ಯಗಳ ಸ್ವಚ್ಛತಾ ಕಾರ್ಯ ನಡೆಯಲಿದೆ.
ಗುರುವಾರ(ಮೇ೩೦) ಶಿಕ್ಷಕರ ಸಭೆ, ಸಮುದಾಯದ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ, ಶುಕ್ರವಾರ(ಮೇ ೩೧) ಪ್ರಾರಂಭೋತ್ಸವ ಆಯೋಜಿಸಲಾಗುತ್ತಿದೆ. ಅಂದು ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಲಾಗುತ್ತಿದೆ. ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ವಿನೂತನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಿಹಿ ಖಾದ್ಯವನ್ನು ಮಾಡಿ ಶಾಲೆಗೆ ಆಗಮಿಸಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗುತ್ತದೆ.ಮಕ್ಕಳಿಗೆ ಉಚಿತವಾಗಿ ನೀಡುವ ಸಮವಸ್ತ್ರ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಗಳಿಗೆ ತಲುಪಿದ್ದು, ಶಾಲೆಗಳಿಗೆ ಹಂಚಿಕೆಯಾಗಬೇಕಿದೆ. ಶೇ. ೪೨.೫೨ರಷ್ಟು ಉಚಿತ ವಿತರಣೆಗಾಗಿ ಪುಸ್ತಕಗಳು ಬಂದಿದ್ದು, ಅವುಗಳನ್ನು ಪ್ರಾರಂಭೋತ್ಸವದಂದು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಎರಡು ತಿಂಗಳಿನಿಂದ ಮೌನ ಆವರಿಸಿದ್ದ ಶಾಲೆಗಳಲ್ಲಿ ಮೇ ೩೧ರಿಂದ ಚಿಣ್ಣರ ಕಲರವ ಕೇಳಿಬರಲಿದೆ.