ಶಾಲೆಗಳು ಮಕ್ಕಳ ಶಿಕ್ಷಣದ ಜೊತೆಗೆ ರಕ್ಷಣಾ ಕೇಂದ್ರಗಳಾಗಬೇಕು. ಅವರು ಜೀವಿಸುತ್ತಿರುವ ಪರಿಸರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಬೇಕಿದೆ.

ಸಂಡೂರು: ಪಟ್ಟಣದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಶನಿವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ತಾಲೂಕು ಆಡಳಿತ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಭಾಗೀದಾರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ಶಾಲೆಗಳು ಮಕ್ಕಳ ಶಿಕ್ಷಣದ ಜೊತೆಗೆ ರಕ್ಷಣಾ ಕೇಂದ್ರಗಳಾಗಬೇಕು. ಅವರು ಜೀವಿಸುತ್ತಿರುವ ಪರಿಸರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಬೇಕಿದೆ. ದೇಶದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಕ್ಕಳಿಗೆ ಶಿಕ್ಷಣ, ಬದುಕುವ, ರಕ್ಷಣೆ ಪಡೆಯುವ, ಭಾಗವಹಿಸುವುದು ಸೇರಿದಂತೆ ಹಲವು ಹಕ್ಕುಗಳಿವೆ. ಯಾವ ಮಕ್ಕಳೂ ಶಾಲೆಯಿಂದ ಹೊರಗುಳಿಯಬಾರದು. ಎಲ್ಲ ಮಕ್ಕಳೂ ತಮಗೆ ತೊಂದರೆಯಾದಾಗ ೧೦೯೮ ಅಥವ ೧೧೨ ಸಂಖೆಗೆ ಕರೆ ಮಾಡಬೇಕು. ಎಲ್ಲ ಮಕ್ಕಳು ಶಾಲೆಯಲ್ಲಿರುವಂತೆ ಮಾಡಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುಭದ್ರಾದೇವಿ ಮಾತನಾಡಿ, ತಾಲೂಕಿನಲ್ಲಿ ೭೭ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಕೆಲವರು ಬಾಲ ಗರ್ಭಿಣಿಯರಾಗಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ತಾಲ್ಲೂಕಿನ ೨೬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾರ್ಟ್ ಫಿಲ್ಮ್ ಪ್ರದರ್ಶನ ಮುಂತಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮಕ್ಕಳಿಂದ ಕೇಳಿ ಬಂದ ಪ್ರಶ್ನೆಗಳು:

ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಮಾತನಾಡಿ, ತಮ್ಮ ಶಾಲೆಯಲ್ಲಿನ ಹಲವು ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿವೆ. ಅರ್ಥಿಂಗ್ ಆಗುತ್ತಿವೆ. ಪೈಪ್‌ಲೈನ್ ಒಡೆದು ಹೋಗಿದೆ. ಶಾಲಾ ಅವಧಿಯ ನಂತರ ಶಾಲೆಯ ಆವರಣದಲ್ಲಿ ಕೆಲವರು ಬಂದು ಕುಡಿದು, ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ ಪ್ರತಿಕ್ರಿಯಿಸಿ, ಬಾಲಕಿಯರ ಪ್ರೌಢ ಶಾಲೆಗೆ ೧೦ ಕೊಠಡಿಗಳು ಮಂಜೂರಾಗಿವೆ. ಅವುಗಳಲ್ಲಿ ಜೂನ್ ಹೊತ್ತಿಗೆ ೫ ಕೊಠಡಿಗಳು ಸಿದ್ಧವಾಗಲಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್ ಗೌಡ ಶೀಘ್ರದಲ್ಲಿ ಶಾಲೆಯ ಆವರಣದಲ್ಲಿ ಆರ್.ಒ ಪ್ಲಾಂಟ್ ಹಾಕಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮಾತನಾಡಿ, ಶಾಲಾ ಮಕ್ಕಳ ಆಧಾರ್ ನೊಂದಣಿ, ತಿದ್ದುಪಡಿಗೆ ವಾರದಲ್ಲಿ ಒಂದೆರಡು ದಿನ ವಿಶೇಷ ಡ್ರೈವ್ ಆರಂಭಿಸುವುದಾಗಿ ತಿಳಿಸಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಸಭೆಯಲ್ಲಿ ಮಕ್ಕಳು ಹೇಳಿರುವ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಪಂ ಇಒ ಮಡಗಿನ ಬಸಪ್ಪ, ಸಿಡಿಪಿಒ ನಾಗರಾಜ್, ತಾಲೂಕು ವೈದ್ಯಾಧಿಕಾರಿ ಡಾ.ಭರತ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ತ್ರಿವೇಣಿ ಪತ್ತಾರ್, ಸಬ್ ಇನ್‌ಸ್ಪೆಕ್ಟರ್ ಡಾಕೇಶ್, ಸಾರಿಗೆ ಸಂಸ್ಥೆಯ ಸಂಡೂರು ಘಟಕದ ವ್ಯವಸ್ಥಾಪಕ ಲಕ್ಷ್ಮಣ, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಉಪಸ್ಥಿತರಿದ್ದರು.