ರಾಷ್ಟ್ರೀಯ ಮೌಲ್ಯವುಳ್ಳ ಶಿಕ್ಷಣದ ವ್ಯವಸ್ಥೆಯನ್ನು ಶಾಲೆಗಳಲ್ಲಿ ಕಾಣಬೇಕಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನರಗುಂದ: ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅನಾರೋಗ್ಯಕರ ಬೆಳವಣಿಗೆ ಆಗಿದೆ. ಗುಣಮಟ್ಟದ ಶಿಕ್ಷಣವಿರುವ ಶಾಲೆಯು ಸ್ಥಿರವಾಗಿ ನಿಲ್ಲುತ್ತದೆ. ಗುಣಮಟ್ಟದ ಶಿಕ್ಷಣವನ್ನು ಪೋಷಕರು ತಮ್ಮ ಮಕ್ಕಳಿಗೆ ಕೊಡಿಸುವಲ್ಲಿ ಸಿದ್ಧರಿದ್ದಾರೆ. ರಾಷ್ಟ್ರೀಯ ಮೌಲ್ಯವುಳ್ಳ ಶಿಕ್ಷಣದ ವ್ಯವಸ್ಥೆಯನ್ನು ಶಾಲೆಗಳಲ್ಲಿ ಕಾಣಬೇಕಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.ಶನಿವಾರ ಪಟ್ಟಣದ ಟಿಎಪಿಎಂಸ್ ಆವರಣದಲ್ಲಿ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ವಿಸ್ಡಮ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಲವು ದಶಕಗಳ ಹಿಂದೆ ನಗರದಲ್ಲಿ ದಲಾಲಿ ಅಂಗಡಿಗಳು ಹಾಗೂ ಔಷಧಿ ಅಂಗಡಿಗಳು ಸಿಕ್ಕಾಪಟ್ಟೆ ಬಾಗಿಲು ತೆರೆದಿದ್ದವು. ನಂತರದ ದಿನಗಳಲ್ಲಿ ಒಂದೊಂದಾಗಿ ಬಾಗಿಲು ಮುಚ್ಚಿದವು. ಶಾಲೆಗಳ ಸ್ಥಿತಿ ಹೀಗಾಗದಿರಲಿ. ಶಾಲಾ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಡಳಿತ ಮಂಡಳಿಯ ಹಸ್ತಕ್ಷೇಪ ಪದೇ ಪದೇ ನಡೆದರೆ ಅಂತಹ ಶಾಲೆಗಳ ಭವಿಷ್ಯ ಅಲ್ಪಾವಧಿ ಆಗಿರುತ್ತದೆ ಎಂದರು.ಶಾಲಾ ಕಟ್ಟಡ ಹಳೆಯದ್ದಾದರೂ ಅದರ ಮರು ವಿನ್ಯಾಸ ಸುಂದರವಾಗಿದೆ. ಶಾಲೆಯ ಸೌಂದರ್ಯ್ಯೀಕರಣ ಮತ್ತು ಉಪಕರಣಗಳು ಅಚ್ಚುಕಟ್ಟಾಗಿದೆ. ಪಾಲಕರು ಮಕ್ಕಳಿಗೆ ಪ್ರೀತಿಯಿಂದ ಎಲ್ಲ ಸಾಮಗ್ರಿಗಳನ್ನು ಕೊಡಿಸುತ್ತಾರೆ. ಆದರೆ, ಮೊಬೈಲ್ ಮಾತ್ರ ಕೊಡಿಸಬೇಡಿ. ಗೈಡ್ ಬದಲು ಪಠ್ಯಪುಸ್ತಕ ಕೊಡಿಸಿದರೆ ಮಕ್ಕಳು ಚುರುಕಾಗಿ ಬೆಳೆಯುತ್ತಾರೆ. ವ್ಯಕ್ತಿಯೊಬ್ಬ ಎಷ್ಟೇ ಎತ್ತರಕ್ಕೆ ಬೆಳೆಯಲಿ, ತಂದೆ ತಾಯಿ ಗುರುವಿಗೆ ಗೌರವ ಕೊಡುವಂತಾಗಬೇಕು. ಈ ಶಾಲೆ ಬೆಳವಣಿಗೆಗೆ ಸಾಧ್ಯವಾದರೆ, ಶಾಸಕರ ಅನುದಾನ ನೀಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಎಸ್.ವಿ. ಹೆಗಡಾಳ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಸ್.ಆರ್. ಪಾಟೀಲ ಮಾತನಾಡಿದರು.ಕಾರ್ಯಕ್ರಮದಲ್ಲಿ ಟಿಎಪಿಸಿಎಂಸ್ ಅಧ್ಯಕ್ಷ ಅಜ್ಜಪ್ಪ ಹುಡೇದ, ನಿಂಗಣ್ಣ ಗಾಡಿ, ವಸಂತ ಭೂಸಾರೆ, ಅಲೋಕಗೌಡ ನಾಯ್ಕರ, ಎಚ್.ಪಿ. ಮುದ್ದನಗೌಡ್ರ, ಎಂ.ಎಸ್. ಪಲ್ಲೇದ, ಐ.ಕೆ. ಪಾಟೀಲ, ನಾಗರಾಜ ಹೊನಕೇರಿ, ಸೇರಿದಂತೆ ಮುಂತಾದವರು ಇದ್ದರು. ಶ್ರೇಯಸ ಜಿಡ್ಡಿಬಾಗಿಲ ಸ್ವಾಗತಿಸಿದರು. ಖ್ಯೋಪಾಧ್ಯಾಯಿನಿ ಅಶ್ವಿನಿ ವಿ.ಜಿ. ನಿರೂಪಿಸಿದರು. ಶಿಕ್ಷಕಿ ಶಿಲ್ಪಾ ವಂದಿಸಿದರು.