ಚಿಕ್ಕಮಗಳೂರುಮಕ್ಕಳಲ್ಲಿ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ತುಂಬದಿದ್ದಲಿ ಸಮಾಜ ಕಟ್ಟಲು ಸಾಧ್ಯವಿಲ್ಲ. ಎಳೆ ವಯಸ್ಸಿನಿಂದ ಬಿತ್ತುವ ಬೀಜ ಆಳವಾಗಿ ಉಳಿದುಕೊಳ್ಳಲಿದ್ದು, ಆ ನಿಟ್ಟಿನಲ್ಲಿ ಶಾಲೆಗಳು ಸಂಸ್ಕಾರಯುತ ಶಿಕ್ಷಣ ಬೋಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಲ್ಲಿ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ತುಂಬದಿದ್ದಲಿ ಸಮಾಜ ಕಟ್ಟಲು ಸಾಧ್ಯವಿಲ್ಲ. ಎಳೆ ವಯಸ್ಸಿನಿಂದ ಬಿತ್ತುವ ಬೀಜ ಆಳವಾಗಿ ಉಳಿದುಕೊಳ್ಳಲಿದ್ದು, ಆ ನಿಟ್ಟಿನಲ್ಲಿ ಶಾಲೆಗಳು ಸಂಸ್ಕಾರಯುತ ಶಿಕ್ಷಣ ಬೋಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ರಾಘವೇಂದ್ರ ಸ್ವಾಮಿ ಮಠದ ಸಮೀಪ ನೂತನವಾಗಿ ಲಿಟಲ್ ಎಲಿ ಶಾಲೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ ಇಂಗ್ಲಿಷ್ ಎನ್ನುವುದು ಜ್ಞಾನವಲ್ಲ, ಒಂದು ಭಾಷೆ. ಆಂಗ್ಲಭಾಷೆ ಕಲಿಯೋಣ, ಆದರೆ, ಮಾತೃಭಾಷೆ ಮರೆಯು ವಂತೆ ಕಲಿಯಬಾರದು ಎಂದು ಹೇಳಿದರು.ಇಂಗ್ಲಿಷ್ ಭಾಷೆಯನ್ನು ಮೂಲ ಭಾಷೆಗಿಂತ ಹೆಚ್ಚು ಮಾತಾಡೋಣ. ಆದರೆ, ಕನ್ನಡದ ಪ್ರೀತಿ ಮರೆತಿಲ್ಲ. ಕನ್ನಡಿಗರು ಎಷ್ಟೇ ಚೆಂದ ಇಂಗ್ಲಿಷ್ ಮಾತಾಡಿದರೆ, ಇಂಗ್ಲಿಷ್‌ ವ್ಯಕ್ತಿಯಾಗಲ್ಲ. ಕನ್ನಡಿಗನೆಂಬ ಹೆಗ್ಗಳಿಕೆ, ಅಭಿಮಾನ ಹಾಗೂ ಮಾತೃಭಾಷೆ ಮೇಲೆ ಹಿಡಿತ ಹೊಂದಿರುವುದು ಅಗತ್ಯ ಎಂದರು.ಕನ್ನಡ ಭಾಷೆಗೆ ಸಂಸ್ಕೃತಿಯಿದೆ ಅದನ್ನು ಕಳೆದುಕೊಳ್ಳಬಾರದು. ಆಂಗ್ಲಭಾಷೆ ಕಲಿಯುವ ಜತೆಗೆ ಕನ್ನಡ ಮರೆಸದಂತೆ ಪಾಲಕರು, ಶಿಕ್ಷಕರು ಕಾಳಜಿ ವಹಿಸಿದರೆ ನಾಡಿನ ಸಂಸ್ಕೃತಿ ಮತ್ತು ಸವಾಲು ಎದುರಿಸಲು ಸಾಧ್ಯ. ಹೀಗಾಗಿ ಮಕ್ಕಳಿಗೆ ಬಾಲ್ಯ ದಿಂದಲೇ ಅರಿವು ಮೂಡಿಸಬೇಕು ಎಂದು ಹೇಳಿದರು.

ಸಾಂಸ್ಕೃತಿಕ ಚಿಂತಕ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಜನನಿ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ. ಪಾಲಕರು ಮಕ್ಕಳನ್ನು ನಾಡಿನ ಹಾಗೂ ರಾಷ್ಟ್ರದ ಸತ್ಪ್ರಜೆಗಳಾಗಿಸಲು ಶ್ರಮಿಸಬೇಕು. ಬಾಲ್ಯದಿಂದಲೇ ಸನ್ನಡತೆ ಬೀಜ ಭಿತ್ತಿದರೆ, ಪ್ರಧಾನಿಗಳ ಫಿಟ್‌ ಇಂಡಿಯಾ ಕನಸು ನನಸಾಗಲಿದೆ. ದೇಶ ಉಜ್ವಲವಾಗಲು ವಿದ್ಯೆ ಹಾಗೂ ಆರೋಗ್ಯ ಮಕ್ಕಳಿಗೆ ಅವಶ್ಯಕ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಪೂರ್ವಿಕರು ಅನಕ್ಷರಸ್ಥ ಕಾಲಘಟ್ಟದಲ್ಲೇ ಮನೆ ಮಕ್ಕಳನ್ನು ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಿದ ಕಾರಣ ವೇದಿಕೆಗಳಲ್ಲಿ ಅಲಂಕರಿಸಿದ್ದಾರೆ. ಸ್ವಾಸ್ಥ್ಯ ಸಮಾಜಕ್ಕೆ ಶಿಕ್ಷಣ ಬಹುದೊಡ್ಡ ಶಿಕ್ಷಣ ವೆಂಬ ನೌಕೆಯಲ್ಲಿ ಪ್ರತಿ ಮಕ್ಕಳು ಸಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಲಿಟಲ್ ಎಲಿ ಸ್ಕೂಲ್‌ನ ಸಂಸ್ಥಾಪಕಿ ಪ್ರೀತಿ ಭಂಡಾರಿ, ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿದರು. ಇದೇ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಶಾಲೆಗಳ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಎಂಇಎಸ್ ವಿದ್ಯಾ ಸಂಸ್ಥೆ ಉಪಾಧ್ಯಕ್ಷೆ ರಾಧಾ ಸುಂದ್ರೇಶ್, ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಜಿಲ್ಲಾ ಲಿಟಲ್ ಎಲಿ ಸಂಸ್ಥೆ ನಿರ್ದೇಶಕ ಅಜಯ್ ಸೋಮನ್, ಟಿ.ಎಂ.ಚರಣ್ ಉಪಸ್ಥಿತರಿದ್ದರು.