ವಿಜ್ಞಾನ ವಿಭಾಗ ಜ್ಞಾನಸಿರಿ ಕ್ಯಾಂಪಸ್‌ಗೆ ಸ್ಥಳಾಂತರ: ಎಂ.ವೆಂಕಟೇಶ್ವರಲು

| Published : Oct 19 2024, 12:31 AM IST / Updated: Oct 19 2024, 12:32 AM IST

ಸಾರಾಂಶ

240 ಎಕರೆ ವಿಸ್ತೀರ್ಣದಲ್ಲಿ 85 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ತುಮಕೂರು ವಿವಿಯ ನೂತನ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ಮುಂದಿನ ವಾರದಿಂದ ವಿಜ್ಞಾನ ವಿಭಾಗಗಳ ತರಗತಿಗಳನ್ನು ಸ್ಥಳಾಂತರಿಸಲಾಗುವುದು

ಕನ್ನಡಪ್ರಭ ವಾರ್ತೆ ತುಮಕೂರು240 ಎಕರೆ ವಿಸ್ತೀರ್ಣದಲ್ಲಿ 85 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ತುಮಕೂರು ವಿವಿಯ ನೂತನ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ಮುಂದಿನ ವಾರದಿಂದ ವಿಜ್ಞಾನ ವಿಭಾಗಗಳ ತರಗತಿಗಳನ್ನು ಸ್ಥಳಾಂತರಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.ನಗರದ ನೂತನ ಕ್ಯಾಂಪಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಸ್ನಾತಕೋತ್ತರ ಪದವಿಯ ೩೦ ಕೋರ್ಸ್‌ಗಳು ನಡೆಯುತ್ತಿದ್ದು, ವಿಜ್ಞಾನ ವಿಭಾಗಗಳು ನಗರ ಕ್ಯಾಂಪಸ್‌ನಿಂದ ಸ್ಥಳಾಂತರಗೊಂಡ ಮೇಲೆ 50 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಆರಂಭಿಸುವ ತಯಾರಿಯಲ್ಲಿದ್ದೇವೆ ಎಂದರು.17.5 ಕೋಟಿ ರು.ವೆಚ್ಚದ, ತಲಾ 2927 ಚದರ ಮೀಟರ್ ವಿಸ್ತೀರ್ಣದ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಎರಡು ಪ್ರತ್ಯೇಕ ಹಾಸ್ಟೆಲ್‌ಗಳು, 2995 ಚದರ ಮೀಟರ್ ವಿಸ್ತೀರ್ಣದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಂಶೋಧನಾರ್ಥಿಗಳ ಹಾಸ್ಟೆಲ್‌ ಕಾಮಗಾರಿ ಈಗಾಗಲೇ ಪೂರ್ಣಗೊಂಡು ಬಳಕೆಗೆ ಸಿದ್ಧವಾಗಿವೆ ಎಂದು ತಿಳಿಸಿದರು.5.53 ಕೋಟಿ ರು. ರೂಸಾ ಅನುದಾನದಲ್ಲಿ 2722 ಚದರ ಮೀಟರ್ ವಿಸ್ತೀರ್ಣದ ಸ್ನಾತಕೋತ್ತರ ಬಾಲಕರ ಹಾಸ್ಟೆಲ್, 1 ಕೋಟಿ 19 ಲಕ್ಷ ರು. ರೂಸಾ ಅನುದಾನದಲ್ಲಿ 360 ಚದರ ಮೀಟರ್ ವಿಸ್ತೀರ್ಣದ ಗ್ರಂಥಾಲಯ ಮತ್ತ ಮಾಹಿತಿ ವಿಜ್ಞಾನ ವಿಭಾಗದ ಪ್ರಯೋಗಾಲಯ, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ₹2 ಕೋಟಿ ಅನುದಾನದಲ್ಲಿ 1760 ಚದರ ಮೀಟರ್ ವಿಸ್ತೀರ್ಣದ ಉಪ ಪ್ರಾದೇಶಿಕ ವಿಜ್ಞಾನಕೇಂದ್ರ ನಿರ್ಮಾಣಗೊಂಡಿದೆ ಎಂದರು.₹40 ಕೋಟಿ ವೆಚ್ಚದ 16,843 ಚದರ ಮೀಟರ್ ವಿಸ್ತೀರ್ಣದ ಬೃಹತ್ ಶೈಕ್ಷಣಿಕ ಭವನದ ನಿರ್ಮಾಣವು ಪೂರ್ಣಗೊಂಡಿದೆ. ಸುಸಜ್ಜಿತ ತರಗತಿ ಕೊಠಡಿಗಳು, ವಿಶಾಲ ಹಜಾರಗಳು, ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯ, ಬೋಧಕ-ಬೋಧಕೇತರ ಸಿಬ್ಬಂದಿ ಕಚೇರಿಗಳು ಸಜ್ಜುಗೊಂಡಿದೆ ಎಂದು ತಿಳಿಸಿದರು.ಕರ್ನಾಟಕ ಸರ್ಕಾರದ ಎಸ್‌ಸಿಪಿ-ಟಿಎಸ್‌ಪಿ ಅನುದಾನದ ₹4 ಕೋಟಿ 45 ಲಕ್ಷ ವೆಚ್ಚದ 3198 ಚದರ ಮೀಟರ್ ವಿಸ್ತೀರ್ಣದ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ₹4 ಕೋಟಿ 75 ಲಕ್ಷ ವೆಚ್ಚದ 1718 ಚದರ ಮೀಟರ್ ವಿಸ್ತೀರ್ಣದ ಕಲಾಭವನ, ₹2 ಕೋಟಿ 50 ಲಕ್ಷ ವೆಚ್ಚದ ಪ್ರಧಾನ ದ್ವಾರ ಹಾಗೂ ಆವರಣ ಗೋಡೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.ಮುಂದಿನ ಯೋಜನೆಗಳಾಗಿ ಕೇಂದ್ರ ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ, ಕೇಂದ್ರೀಕೃತ ಅಡುಗೆ ಮನೆ, ಎರಡನೆಯ ಶೈಕ್ಷಣಿಕ ಭವನ, ಆಡಳಿತ ಕಚೇರಿ ಆರಂಭಿಸುವ ತಯಾರಿ ನಡೆದಿದೆ ಎಂದರು.ಕೆಎಸ್‌ಆರ್‌ಟಿಸಿಯಿಂದ ದೈನಂದಿನ ಬಸ್ ಸೌಲಭ್ಯವಿದ್ದು ಅ. 9 ರಿಂದ ಆರಂಭವಾಗಿದೆ. ಪ್ರತಿನಿತ್ಯ ತುಮಕೂರು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 8,9, 10, 11, ಮಧ್ಯಾಹ್ನ 12, 1, 2, 3, 4,5, 6 ಗಂಟೆಯವರೆಗೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ನಗರ ಕ್ಯಾಂಪಸ್‌ನಿಂದ ಬೆಳಗ್ಗೆ 8.30, 9.30, 10.30,11.30, ಮಧ್ಯಾಹ್ನ12.30, 1.30, 2.30, 3.30, 4.30, 5.30, 6.30 ರ ವರೆಗೂ ತುಮಕೂರು ವಿವಿಯ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ತೆರಳಲು ಬಸ್‌ಗಳು ಲಭ್ಯವಿರಲಿವೆ ಎಂದರು.ಹೊಸ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿರುವ ಇತರ ಸೌಲಭ್ಯಗಳೆಂದರೆ ಊಟೋಪಚಾರಕ್ಕಾಗಿ ಕೆಫೆಟೀರಿಯಾ, ವೈಫೈ, ಜೆರಾಕ್ಸ್, ಸ್ಟೇಶನರಿ ಸೌಲಭ್ಯ, ಗ್ರಂಥಾಲಯ ಮತ್ತ ಮಾಹಿತಿ ವಿಜ್ಞಾನ ಪ್ರಯೋಗಾಲಯ, ವಿದ್ಯಾರ್ಥಿಗಳ ಪ್ರತಿಭೆಗೆ ನೂತನ ಕಲಾಭವನ ವೇದಿಕೆಯಾಗಲಿದೆಎಂದು ತಿಳಿಸಿದರು.ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಶೈಕ್ಷಣಿಕ ಭವನದ ಮುಂದುವರಿದ ಭಾಗವಾಗಿ ಇನ್ನೂ ಎರಡು ಕಟ್ಟಡಗಳು ವೃತ್ತಾಕೃತಿಯಲ್ಲಿ ಬರಲಿದ್ದು, ಅನುದಾನ ಪಡೆಯುವ ಸಂಬಂಧ ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದೆ.ಕೇಂದ್ರ ಸರ್ಕಾರಕ್ಕೆಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದ್ದು, ಅನುದಾನದ ನಿರೀಕ್ಷೆ ಮಾಡಲಾಗಿದೆ ಎಂದರು.

ಹೊಸ ಕ್ಯಾಂಪಸ್‌ನ 300 ಎಕರೆ ವಿಸ್ತೀರ್ಣದಲ್ಲಿ ನೂತನವಾಗಿ ಫಿಲಂ ಇನ್ಸ್ಟಿಟ್ಯೂಟ್ ಪ್ರಾರಂಭ ಮಾಡಲು ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಜೊತೆ ಮಾತುಕತೆ ನಡೆಸಲಾಗಿದ್ದು, ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಕಡೆಯ ಹಂತವಾಗಿ ಕಾನೂನು ಸಲಹೆ ಪಡೆಯಲಾಗುತ್ತಿದೆ.

ಪ್ರೊ. ಎಂ.ವೆಂಕಟೇಶ್ವರಲು ಕುಲಪತಿ ತುಮಕೂರು ವಿವಿ