ಹಾಸನ ಜಿಲ್ಲೆಯಿಂದ ಭದ್ರಾ ಅರಣ್ಯದ ಕಡೆಗೆ ಕಾಡಾನೆ ಸ್ಥಳಾಂತರಿಸುವ ‘ಆಪರೇಷನ್ ಗಜ’ ಕಾರ್ಯಾಚರಣೆ ಕುರಿತು ಚಿಕ್ಕಮಗಳೂರು ಭಾಗದ ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಧಾನಸಭೆ ಸಭಾಧ್ಯಕ್ಷರು ಬುಧವಾರ ಪ್ರತ್ಯೇಕ ಸಭೆ
ಬೆಂಗಳೂರು : ಹಾಸನ ಜಿಲ್ಲೆಯಿಂದ ಭದ್ರಾ ಅರಣ್ಯದ ಕಡೆಗೆ ಕಾಡಾನೆ ಸ್ಥಳಾಂತರಿಸುವ ‘ಆಪರೇಷನ್ ಗಜ’ ಕಾರ್ಯಾಚರಣೆ ಕುರಿತು ಚಿಕ್ಕಮಗಳೂರು ಭಾಗದ ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಧಾನಸಭೆ ಸಭಾಧ್ಯಕ್ಷರು ಬುಧವಾರ ಪ್ರತ್ಯೇಕ ಸಭೆ ನಡೆಸಿದ್ದು, ನ.30 ರವರೆಗೆ ಬಲವಂತದ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.
ನ.30ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚಿಕ್ಕಮಗಳೂರು ಭಾಗದ ಶಾಸಕರು, ಪರಿಷತ್ ಸದಸ್ಯರೊಂದಿಗೆ ಸಭೆ ನಡೆಯಲಿದ್ದು, ಬಳಿಕ ಕಾರ್ಯಾಚರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಇದೇ ವೇಳೆ ನ.30 ರ ಸಭೆಯ ಅಂತಿಮ ನಿರ್ಧಾರದವರೆಗೆ ತಾತ್ಕಾಲಿಕವಾಗಿ ನಮ್ಮ ರಾಜೀನಾಮೆ ನಿರ್ಧಾರ ವಾಪಸು ಪಡೆದಿದ್ದೇವೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದ್ದಾರೆ.
ಬುಧವಾರ ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ ಅವರು ನಯನಾ ಮೋಟಮ್ಮ, ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ ಅವರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸಿದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಕಾರ್ಯಾಚರಣೆ ಮಾಹಿತಿ ಪಡೆದರು. ಅಂತಿಮವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಅನುಮಾನಗಳಿವೆ. ನ.30 ರ ಸಭೆ ನಡೆಯುವವರೆಗೆ ಸಂಪೂರ್ಣವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿ ನಿಗಾವಹಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸ್ಪಷ್ಟ ನಿರ್ದೇಶನ:
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಯನಾ ಮೋಟಮ್ಮ, ನಮ್ಮ ಐದು ಮಂದಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯಾಚರಣೆ ಆರಂಭಿಸಿದ್ದು ತಪ್ಪು. 58 ಆನೆಗಳನ್ನು ನಮ್ಮ ಊರುಗಳ ಮೇಲೆ ಬಿಟ್ಟು ಓಡಿಸಿಕೊಂಡು ಹೋಗುತ್ತೇವೆ ಎಂದರೆ ತಮಾಷೆಯೇ? ಶಿವಮೊಗ್ಗದಲ್ಲಿ ನುರಿತ ಆನೆಯೇ ಅಂಬಾರಿ ಹೊರುವಾಗ ಸೃಷ್ಟಿಸಿದ ಅನಾಹುತ ನೋಡಿಲ್ಲವೇ? ಕೂಲಿ ಕಾರ್ಮಿಕರ ಜೀವ, ಕಾಫಿ ಬೆಳೆ, ಜನಸಾಮಾನ್ಯ ಪ್ರಾಣಕ್ಕೆ ಹೊಣೆ ಯಾರು? ಎಂದು ನಯನಾ ಕಿಡಿಕಾರಿದರು.
ರಾಜೀನಾಮೆ ಮುಖ್ಯವೇ?:
ನಿಮ್ಮ ರಾಜೀನಾಮೆ ನಿರ್ಧಾರ ಹಿಂಪಡೆದಿದ್ದೀರಾ ಎಂಬ ಪ್ರಶ್ನೆಗೆ, ನನ್ನ ರಾಜೀನಾಮೆ ಮುಖ್ಯವೋ ಅಥವಾ ಕಾರ್ಯಾಚರಣೆ ನಿಲ್ಲಿಸುವುದು ಮುಖ್ಯವೋ? ನ.30 ರಂದು ಸಭೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ ಸುಮ್ಮನಾಗಿದ್ದೇವೆ ಎಂದರು.
ಶಾಸಕರನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ-ಹರಿ:
ಬಿ.ಕೆ.ಹರಿಪ್ರಸಾದ್ ಮಾತನಾಡಿ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಮುಖ್ಯಮಂತ್ರಿ ಜೊತೆಗೂ ಚರ್ಚೆ ಮಾಡಿದ್ದೇನೆ. ನ.30 ರಂದು ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತಾರೆ. ಜನ ಹಾಗೂ ಪ್ರಾಣಿಗಳಿಗೂ ತೊಂದರೆ ಅಗಬಾರದು ಎಂದರು.
ಬೆಳಗಾವಿ ಅದಿವೇಶನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕರು ಕೇಳಿದ್ದಾರೆ. ಆನೆಗಳನ್ನು ಊರಿಗೆ ಕರೆದುಕೊಂಡು ಬರಲು ಆಗುವುದಿಲ್ಲ, ಕಾಡಿನಲ್ಲೇ ಬಿಡಬೇಕು. ಈ ಬಗೆಗಿನ ಗೊಂದಲ ಬಗೆಹರಿಸುತ್ತೇವೆ ಎಂದು ಹೇಳಿದರು.

