ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ಮೇಳ ಸಹಾಯಕ: ಕಂದಕೂರು

| Published : Feb 25 2024, 01:46 AM IST

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ಮೇಳ ಸಹಾಯಕ: ಕಂದಕೂರು
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆ ಭರಾಟೆಯಲ್ಲಿ ವೈಜ್ಞಾನಿಕ ಅವಿಷ್ಕಾರಗಳಿಂದ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ವಿಜ್ಞಾನ ವಸ್ತುಗಳ ಪ್ರದರ್ಶನವು ಮಕ್ಕಳಿಗೆ ವೈಜ್ಞಾನಿಕ ಜ್ಞಾನ ಹೆಚ್ಚಿಸಲು ಸಹಾಯಕವಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ಮೇಳ ಕಾರ್ಯಕ್ರಮ ಸಹಕಾರಿ ಎಂದು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಹೇಳಿದರು.

ನಗರದ ಶಾಂತಿ ಸದನ ಶಾಲೆಯಲ್ಲಿ ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ನಡೆದ ವಿಜ್ಞಾನ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಕಾರ್ಯಕ್ರಮವು ಮಕ್ಕಳ ಪ್ರತಿಭೆ ಗುರುತಿಸುವ ವೇದಿಕೆಯಾಗಿದೆ‌. ಮಕ್ಕಳು ಆಸಕ್ತಿ ತಿಳಿದುಕೊಳ್ಳಲು ಈ ಮೇಳ ಸಹಾಯವಾಗಲಿದೆ‌. ಶಾಂತಿ ಸದನ ಶಾಲೆಯು ಹಮ್ಮಿಕೊಂಡ ಈ ಕಾರ್ಯಕ್ರಮವು ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

ಆಧುನಿಕತೆ ಭರಾಟೆಯಲ್ಲಿ ವೈಜ್ಞಾನಿಕ ಅವಿಷ್ಕಾರಗಳಿಂದ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ವಿಜ್ಞಾನ ವಸ್ತುಗಳ ಪ್ರದರ್ಶನವು ಮಕ್ಕಳಿಗೆ ವೈಜ್ಞಾನಿಕ ಜ್ಞಾನ ಹೆಚ್ಚಿಸಲು ಸಹಾಯಕವಾಗಿದೆ ಎಂದರು.

ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳಲ್ಲಿ ಜ್ಞಾನ ಮಟ್ಟ ಸುಧಾರಣೆ ಕಾಣಲಿದೆ ಎಂದರು.

ಮುಖ್ಯಗುರು ಸಂತೋಷ ದಾಸ್ ಮಾತನಾಡಿ, ಮಕ್ಕಳು ಆಸಕ್ತಿ ವಹಿಸಿ ಈ ಮೇಳದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶನ ಮಾಡಿದ್ದಾರೆ. ಆಹಾರ ಮೇಳದಿಂದ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ. ವಿಜ್ಞಾನ ಮೇಳವು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಅರಿವು ಮೂಡಿಸಲು ನೆರವಾಗಲಿದೆ ಎಂದರು.

ವಿಜ್ಞಾನ ಮೇಳದ ಜತೆಗೆ ಆಹಾರ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಶರಣಗೌಡ ಕಂದಕೂರು ಅವರಿಗೆ ವಿದ್ಯಾರ್ಥಿಗಳು ವಿಜ್ಞಾನ ವಸ್ತುಗಳ ಪ್ರಾತ್ಯಕ್ಷಿಕೆ ಮಾದರಿಗಳ ಮೂಲಕ ಅವುಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಶಾಸಕರು ‌ಸಹ ಮಕ್ಕಳಿಗೆ ಪ್ರಶ್ನೆ ಮಾಡಿ ಮಾಹಿತಿ ಪಡೆದರು. ವಿಶೇಷವಾಗಿ ಮಕ್ಕಳು ಮನೆಯಿಂದ ತಯಾರಿಸಿಕೊಂಡು ಬಂದ ಆಹಾರ ಖಾದ್ಯಗಳ ಪ್ರದರ್ಶನ ನಡೆಯಿತು. ಈ ವೇಳೆ ಶಾಸಕ ಕಂದಕೂರು ಖಾದ್ಯ ಸೇವಿಸಿ ಮಕ್ಕಳಿಗೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಾಹೇಬರೆಡ್ಡಿ ಬಕ್ಕಾ, ಡಾ. ಸುದತ್ ದರ್ಶನಾಪುರ, ಸಾಬಣ್ಣ, ಬಸವಂತರೆಡ್ಡಿ ಸೇರಿದಂತೆ ಇತರರಿದ್ದರು.