ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ನವೆಂಬರ್‌ 14 ರಂದು ಮಕ್ಕಳ ದಿನಾಚರಣೆಯಂದು ತಿಕೋಟಾದಲ್ಲಿ ವಿಜ್ಞಾನ ಜಾತ್ರೆ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ನವೆಂಬರ್‌ 14 ರಂದು ಮಕ್ಕಳ ದಿನಾಚರಣೆಯಂದು ತಿಕೋಟಾದಲ್ಲಿ ವಿಜ್ಞಾನ ಜಾತ್ರೆ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ತಿಳಿಸಿದರು.

ತಿಕೋಟಾದಲ್ಲಿ ವಿಜ್ಞಾನ ಜಾತ್ರೆಯ ಬೃಹತ್ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಈ ವಿಜ್ಞಾನ ಜಾತ್ರೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಮತ್ತು ಸಂಶೋಧನೆಯ ಶಕ್ತಿಯನ್ನು ಹೆಚ್ಚಿಸುವ ಮಹತ್ತರ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿದೆ. ಮಕ್ಕಳು ತಮ್ಮ ನವೀನ ಆವಿಷ್ಕಾರಗಳ ಮಾದರಿಯನ್ನು ಪ್ರದರ್ಶಿಸಲು ಈ ನೂತನವಾಗಿ ವೇದಿಕೆಯನ್ನು ಒದಗಿಸಲಾಗುತ್ತಿದೆ ಎಂದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಈ ಜಾತ್ರೆಯಲ್ಲಿ ಭಾಗವಹಿಸಿದ್ದಲಿದ್ದಾರೆ. ತಿಕೋಟಾ ತಾಲೂಕಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು, ಎಸ್‌.ಡಿ.ಎಂ.ಸಿ ಪದಾಧಿಕಾರಿಗಳು, ಪಾಲಕರು ಮತ್ತು ಮೇಳಕ್ಕೆ ಭೇಟಿ ನೀಡುವುದು ಸೇರಿದಂತೆ 10 ಸಾವಿರ ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯಿಂದ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗುವ ಸಾರ್ವಜನಿಕ ಸಭೆ ನಡೆಯಲಿದೆ. ‌ನೂರಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಸಂಶೋಧನೆಗಳನ್ನು ಪ್ರದರ್ಶಿಸಲಿದ್ದಾರೆ. ಬರುವವರಿಗೆ ಭೋಜನ ವ್ಯವಸ್ಥೆಯೂ ಸೇರಿ ನಡೆಸಬೇಕಾದ ತಯಾರಿ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.ವಿಜ್ಞಾನ ಜಾತ್ರೆಯಲ್ಲಿ 200ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ವಿಜ್ಞಾನ ಪ್ರದರ್ಶನ ನಡೆಸುವ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ. ತೀರ್ಪುಗಾರರು ಈ ಮಕ್ಕಳನ್ನು ಆಯ್ಕೆ ಮಾಡಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿಭಾಗದಲ್ಲಿ ತಲಾ ಮೂರು ಬಹುಮಾನಗಳಿವೆ. ಮೊದಲ ಬಹುಮಾನ ₹ 25 ಸಾವಿರ, ದ್ವಿತೀಯ ಬಹುಮಾನವಾಗಿ ₹ 15 ಸಾವಿರ ಹಾಗೂ ತೃತೀಯ ಬಹುಮಾನ ₹10 ಸಾವಿರ ನೀಡಲು ತೀರ್ಮಾನಿಸಲಾಗಿದೆ. ಬಹುಮಾನಗಳನ್ನು ಇನ್ನೊಂದು ದಿನದಂದು ಸಮಾರೋಪ ಸಮಾರಂಭ ಮಾಡಿ ಬಹುಮಾನ ವಿತರಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.ಮಕ್ಕಳಿಗೆ ವಾಹನ ಸೌಕರ್ಯ, ಕುಡಿವ ನೀರು, ಶೌಚಾಲಯ ಸೇರಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು, ಸ್ವಯಂ ಸೇವಕರ ನಿಯೋಜನೆ, ಕಾರ್ಯಕ್ರಮದ ನೇರ ಪ್ರಸಾರ, ಮೇಲ್ವಿಚಾರಣಾ ಅಧಿಕಾರಿಗಳ ತಂಡ ರಚಿಸುವುದು ಸೇರಿದಂತೆ ಅನೇಕ ಮಹತ್ವದ ವಿಷಯಗಳನ್ನು ಇದೇ ವೇಳೆ ಚರ್ಚಿಸಲಾಯಿತು. ಇದು ನಿಜವಾದ ಜಾತ್ರೆ ರೂಪ ಪಡೆಯಬೇಕು. ಇದು ರಾಜ್ಯದ ಗಮನ ಸೆಳೆಯಬೇಕು ಹಾಗೂ ಸಂಬಂಧಿತ ಇಲಾಖೆಗಳ ಸಹಕಾರ ಪಡೆಯಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ಅಗಸ್ತ್ಯ ಫೌಂಡೇಶನ್‌ನ ಉತ್ತರ ಕರ್ನಾಟಕ ವಿಭಾಗದ ಸಂಯೋಜನಾಧಿಕಾರಿ ಗೀತಾ ಪಾಟೀಲ, ಬಿ.ಎಲ್‌.ಡಿ.ಇ ಸಂಸ್ಥೆ ಆಡಳಿತಾಧಿಕಾರಿ ಎಂ.ಎನ್.ಚೋರಗಸ್ತಿ, ಎಂ.ಸಿ.ತಳವಾರ, ಬಿ.ಎನ್.ಭೋಸ್ಲೆ, ಬಿಇಓ ಕಚೇರಿ ಅಧಿಕಾರಿ ವಸಂತ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.