ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ವಿಜ್ಞಾನಹಬ್ಬ, ವಸ್ತುಪ್ರದರ್ಶನ ಸಂಭ್ರಮ

| Published : Mar 05 2024, 01:32 AM IST

ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ವಿಜ್ಞಾನಹಬ್ಬ, ವಸ್ತುಪ್ರದರ್ಶನ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಅನುಪಯುಕ್ತ ವಸ್ತುಗಳನ್ನು‌ ಬಳಸಿಕೊಂಡು ಕಡಿಮೆ ವೆಚ್ಚದಿಂದ ತಯಾರಿಸಿದ ವಿಜ್ಞಾನ, ಗಣಿತ ಹಾಗೂ ಕಲೆಗೆ ಸಂಬಂಧಿಸಿದ ವಸ್ತುಗಳು ಮಕ್ಕಳ ಸೃಜನಶೀಲತೆಗೆ ಸೂಕ್ತ ವೇದಿಕೆ ಒದಗಿಸಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಸಮೀಪದ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2024 ಅಂಗವಾಗಿ ವಿಜ್ಞಾನ, ಗಣಿತ ಹಾಗೂ ಸಮಾಜ‌ ವಿಜ್ಞಾನದ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬ ಗಮನ ಸೆಳೆಯಿತು. ಶಾಲೆಯ ವಿಜ್ಞಾನ ಸಂಘ, ಇಕೋ ಕ್ಲಬ್, ಗಣಿತ ಸಂಘ, ಕಲಾ ಸಂಘ, ಎನ್.ಎಸ್.ಎಸ್.ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ಅನುಪಯುಕ್ತ ವಸ್ತುಗಳನ್ನು‌ ಬಳಸಿಕೊಂಡು ಕಡಿಮೆ ವೆಚ್ಚದಿಂದ ತಯಾರಿಸಿದ ವಿಜ್ಞಾನ, ಗಣಿತ ಹಾಗೂ ಕಲೆಗೆ ಸಂಬಂಧಿಸಿದ ವಸ್ತುಗಳು ಮಕ್ಕಳ ಸೃಜನಶೀಲತೆಗೆ ಸೂಕ್ತ ವೇದಿಕೆ ಒದಗಿಸಿತು.

ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿದ ರೋಟರಿ ಸಂಸ್ಥೆಯ ಅಧ್ಯಕ್ಷೆ ಸುನಿತಾ ಮಹೇಶ್ ಮಾತನಾಡಿ,

ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಸಮಾಜ ವಿಷಯಗಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿಜ್ಞಾನ ಎಲ್ಲರಿಗೂ ಅಗತ್ಯವಾಗಿದೆ.

ಭಾರತವು ವಿಶ್ವಮಟ್ಟದಲ್ಲಿ ವಿಜ್ಞಾನದ ಪ್ರಗತಿಗೆ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ದೇಶೀಯ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.

ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ಮಹೇಶ್ ನಲ್ವಾಡೆ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿರುವುದರಿಂದ ಭಾರತ ದೇಶವು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಭವಿಷ್ಯದ ಪೀಳಿಗೆಯನ್ನು ವೈಜ್ಞಾನಿಕ ಕ್ಷೇತ್ರದಲ್ಲಿ ತೊಡಗಲು ಹೆಚ್ಚಿನ ಪ್ರೇರೇಪಣೆ ನೀಡುತ್ತದೆ ಎಂದರು.

ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಕುರಿತು ಮಾತನಾಡಿದ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಅವರು ಸರ್ ಸಿ.ವಿ.ರಾಮನ್ ಅವರ ರಾಮನ್ ಎಫೆಕ್ಟ್ ಕುರಿತು ವಿವರಿಸಿದರು.

ದೇಶದ ಅಭಿವೃದ್ಧಿಗೆ ಭಾರತೀಯ ವಿಜ್ಞಾನಿಗಳ ಕೊಡುಗೆಯನ್ನು ಗುರುತಿಸಲು ಪ್ರತಿ ವರ್ಷ ಫೆ.28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಗಣಿತ ಸಂಘದ ಶಿಕ್ಷಕಿ ಬಿ.ಎನ್.ಸುಜಾತ,‌ ಸಮಾಜ ಸಂಘದ ಶಿಕ್ಷಕಿ ಎಸ್.ಎಂ.ಗೀತಾ, ರೋಟರಿ ಕಾರ್ಯದರ್ಶಿ ಶರ್ಲಿ ಸಂತೋಷ್ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು.

ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಮಕ್ಕಳು ಪ್ರದರ್ಶಿಸಿದ ವಿಜ್ಞಾನ, ಗಣಿತ ಹಾಗೂ ಕಲಾ ವಸ್ತುಗಳ ಮಾದರಿಗಳು ಗಮನ ಸೆಳೆದವು.

ಶಾಲೆಯ ಎಸ್.ಡಿ.ಎಂ.ಸಿ., ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ ಹಾಗೂ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಘಟಕದ ಸಹಕಾರದೊಂದಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರೌಢಶಾಲಾ ಮಕ್ಕಳು ಕಡಿಮೆ ವೆಚ್ಚದ ಹಾಗೂ ಅನುಪಯುಕ್ತ ವಸ್ತುಗಳಿಂದ ಸ್ವತಃ ತಯಾರಿಸಿದ ವಿಜ್ಞಾನದ ವಿವಿಧ ಮಾದರಿಗಳು ಹಾಗೂ ಪ್ರದರ್ಶಿಸಿದ ವಿಜ್ಞಾನ ಪ್ರಯೋಗಗಳು ಪೋಷಕರ ಮೆಚ್ಚುಗೆಗೆ ಪಾತ್ರವಾದವು.

ಸ್ವಚ್ಛ ಗ್ರಾಮ ಆರೋಗ್ಯ ಧಾಮ, ಮಳೆನೀರು ಕೊಯ್ಲು, ಕೃಷಿಯಂತ್ರ, ಚಂದ್ರಯಾನ- 3 ರ ಮಾದರಿ, ಖಗೋಳ ವಿಜ್ಞಾನ ಮತ್ತು ಸೌರವ್ಯೂಹ ವ್ಯವಸ್ಥೆ, ಗಣಿತದಲ್ಲಿ ಗಣಿತಜ್ಞ ರಾಮಾನುಜನ್ ರ ಸಾಧನೆಗಳು ಗಮನ ಸೆಳೆದವು.

ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾನ್ಯ ಜ್ಞಾನ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಕ್ಕಳೇ ತಯಾರಿಸಿದ 25 ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನದಲ್ಲಿ ಇಡಲಾಗಿತ್ತು.