ಸಾರಾಂಶ
ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ ಎಂಬ ಮಾತಿನಂತೆ ಸ್ನೇಹಿತರ ಪುನರ್ಮಿಲನ ಹಾಗೂ ಪರಸ್ಪರ ಸಹಕಾರ ಮುಂದುವರೆಯುವುದು ಅಗತ್ಯವಿದೆ.
ಸಂಡೂರು: ತಾಲೂಕಿನ ನಂದಿಹಳ್ಳಿಯಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಪದವಿ ಕಾಲೇಜಿನ ೧೯೯೯ರಿಂದ ೨೦೦೯ರ ಬ್ಯಾಚಿನ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭ ಕೇಂದ್ರದ ಜ್ಞಾನಸರೋವರ ಸಭಾಂಗಣದಲ್ಲಿ ಭಾನುವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರದ ನಿರ್ದೇಶಕ ಡಾ.ಬಿ. ರವಿ ಮಾತನಾಡಿ, ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ ಎಂಬ ಮಾತಿನಂತೆ ಸ್ನೇಹಿತರ ಪುನರ್ಮಿಲನ ಹಾಗೂ ಪರಸ್ಪರ ಸಹಕಾರ ಮುಂದುವರೆಯುವುದು ಅಗತ್ಯವಿದೆ ಎಂದರು.ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಗಂಗಾಧರ ಮೂರ್ತಿ ಕೇಂದ್ರದಲ್ಲಿ ತಮ್ಮ ೩೨ ವರ್ಷಗಳ ಸೇವೆಯನ್ನು ಸ್ಮರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ನಿರ್ದೇಶಕ ಡಾ.ಬಿ. ರವಿ ಪದವಿ ಕೋರ್ಸ್ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೇಂಧ್ರದ ಖನಿಜ ಸಂಸ್ಕರಣ ಕೇಂದ್ರದ ಮುಖ್ಯಸ್ಥ ಪಿ.ಶರತ್‌ಕುಮಾರ್, ನಿವೃತ್ತ ನಿರ್ದೇಶಕ ಅಪ್ಪನಗೌಡ, ಪ್ರಾಧ್ಯಾಪಕ ನಾಡಗೌಡ ತಮ್ಮ ನುಡಿಗಳಲ್ಲಿ ಕೇಂದ್ರದಲ್ಲಿನ ತಮ್ಮ ಸೇವಾ ದಿನಗಳು, ಕೇಂದ್ರದ ಪ್ರಗತಿಯ ಕುರಿತು ಮಾತನಾಡಿದರು.ಕೇಂದ್ರದ ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಲೋಕಾಯುಕ್ತ ಇನ್‌ಸ್ಪೆಕ್ಟರ್ ಮಹಮ್ಮದ್ ರಫಿ, ಜರ್ಮನಿಯಲ್ಲಿ ಉದ್ಯೋಗಿಯಾದ ವಿಶ್ವನಾಥ ಬಾಳೆಕಾಯಿ, ಮೈನ್ಸ್ ಆ್ಯಂಡ್ ಜಿಯಾಲಜಿ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಪುಷ್ಪಲತಾ, ಉದ್ಯಮಿ ನಿರ್ಮಲ, ಬಸವರಾಜಗೌಡ, ಜ್ಯೊತಿಪ್ರಕಾಶ್, ಕುಮಾರ್ ಕೇಂದ್ರದಲ್ಲಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಗುರುಗಳ ಸೇವೆ ಸ್ಮರಿಸಿದರು.
ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಪಿ.ಸಿ. ನಾಗನೂರ, ಎಂ.ಡಿ. ಖಣದಾಳ್, ಶೋಭಾ ಕಣದಾಳ, ರುದ್ರಮುನಿಯಪ್ಪ, ಗೋಪಾಲಕೃಷ್ಣ, ರುದ್ರಪ್ಪ, ಹಳೆ ವಿದ್ಯಾರ್ಥಿಗಳು, ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.