ಧಾರವಾಡ:

ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವನ ದೈನಂದಿನ ಶ್ರಮ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರೂ, ಅದು ಮಾನವನ ಪರಸ್ಪರ ಸಂಬಂಧ ಮತ್ತು ಪ್ರಕೃತಿಯೊಂದಿಗೆ ಇರುವ ಸಂಬಂಧವನ್ನು ಕೂಡ ಬದಲಾಯಿಸಿದೆ ಎಂದು ಇಸ್ರೋದ ನಿಕಟಪೂರ್ವ ಅಧ್ಯಕ್ಷ ಎ.ಎಸ್. ಕಿರಣಕುಮಾರ ಹೇಳಿದರು.

ಇಲ್ಲಿಯ ಕರ್ನಾಟಕ ವಿವಿ 75ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಮಾನವನಿಗೆ ನಿಜವಾದ ಬುದ್ಧಿಮತ್ತೆ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಮತ್ತು ಎರಡು ವಿಧದ ಸ್ಮರಣೆಗಳಿವೆ. ಇವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಂಡರೆ ಜೀವನಯಾತ್ರೆಯನ್ನು ಯಶಸ್ವಿಯಾಗಿ ಸಾಗಿಸುವ ಸಾಮರ್ಥ್ಯ ಬರಲಿದೆ ಎಂದು ತಿಳಿಸಿದರು.

ಪ್ರಸ್ತುತ ಲಭ್ಯವಿರುವ ತಂತ್ರಜ್ಞಾನ ಅವಲಂಬಿಸಿ ಸಮಸ್ಯೆ ಪರಿಹರಿಸಲಾಗದು. ಇದು ಕೆಲ ಅಡೆತಡೆ ದಾಟಲು ಸಹಾಯ ಮಾಡಬಲ್ಲದಾದರೂ ನೀವು ಇತರರಿಗಿಂತ ಹಿಂದೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ನೀವು ನಿಮ್ಮ ಜೀವನಯಾತ್ರೆಯನ್ನು ಹೇಗೆ ಸಾಗಿಸುತ್ತೀರಿ ಎಂಬುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದು ಪದವೀಧರರಿಗೆ ಸಲಹೆ ನೀಡಿದರು.

ಭಾರತದಲ್ಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ ಶಿಕ್ಷಣವನ್ನು ಸಮರ್ಪಕವಾಗಿ ಒದಗಿಸುವುದು ಒಂದು ದೊಡ್ಡ ಸವಾಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಸಮಾಜದಲ್ಲಿ ತರುತ್ತಿರುವ ವೇಗವಾದ ಬದಲಾವಣೆ ಗಮನಿಸಿದರೆ, ಮುಂದಿನ ತಲೆಮಾರುಗಳಿಗೆ ಸಮರ್ಪಕ ಶಿಕ್ಷಣ ನೀಡುವುದು ದಿನೇ ದಿನೇ ಕಷ್ಟವಾಗುತ್ತಿದೆ ಎಂಬುದು ಸ್ಪಷ್ಟ. ಸುವ್ಯವಸ್ಥಿತ, ನಿಯಂತ್ರಿತ ಮತ್ತು ಸಂಘಟಿತ ಪರಿಸರದಿಂದ ಹೆಚ್ಚು ಅಸ್ಥಿರ, ಸವಾಲಿನ ಪರಿಸ್ಥಿತಿಗಳಿಗೆ ಸಾಗುವ ಹಂತ ನಿಮ್ಮದು. ಈ ಹಂತದಲ್ಲಿ ನೀವು ಪರಿಸ್ಥಿತಿಗಳನ್ನು ಚಾತುರ್ಯ ಮತ್ತು ಧೈರ್ಯದಿಂದ ಎದುರಿಸಲು ಸಾಮರ್ಥ್ಯ ಅಗತ್ಯ ಎಂದರು.


ಮಾನವ ತನ್ನ ಸಾಮರ್ಥ್ಯ ಹೆಚ್ಚಳಕ್ಕೆ ಸ್ವಾಭಾವಿಕವಾಗಿ ಹೊಸ ಸಾಧನ ಬಳಸುತ್ತಿದ್ದಾನೆ. ಆದರೆ, ಈ ವೇಗವಾದ ಮತ್ತು ಅಸ್ಥಿರ ಬದಲಾವಣೆಗಳ ಪರಿಣಾಮವಾಗಿ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಒತ್ತಡ ಉಂಟಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯುವ ಮಾನವ ಪ್ರಯತ್ನ ನಿಲ್ಲದು. ಆದರೆ, ಅದರ ಪರಿಣಾಮ ಎದುರಿಸುವ ಸಾಮರ್ಥ್ಯವನ್ನು ವ್ಯಕ್ತಿಗಳು ಮತ್ತು ಸಮಾಜಗಳು ಬೆಳೆಸಿಕೊಳ್ಳಬೇಕು ಎಂದರು.