ಬಸವ-ಪಂಚಮಿ: ಕೈದಿಗಳಿಗೆ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಉಪ-ಕಾರಾಗೃಹ ಅಧಿಕಾರಿ ಕನ್ನಡಪ್ರಭ ವಾರ್ತೆ ಹಳಿಯಾಳ
ವಚನ ಸಾಹಿತ್ಯವು ಕೇವಲ ಧಾರ್ಮಿಕ ವಿಚಾರ ಪ್ರತಿಪಾದಿಸುವ ಸಾಹಿತ್ಯವಲ್ಲ, ಅದು ವ್ಯಕ್ತಿಯಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಹಾಗೂ ಸತ್ಯದ ಮಾರ್ಗದಲ್ಲಿ ನಡೆಯುವ ಪ್ರಜ್ಞೆಯನ್ನು ಬೆಳೆಸುವ ಶಕ್ತಿಯ ಸಾಹಿತ್ಯವಾಗಿದೆ ಎಂದು ಹಳಿಯಾಳ ಉಪ ಕಾರಾಗೃಹದ ಅಧಿಕಾರಿ ರಾಜಕುಮಾರ ದೊಡಮನಿ ಹೇಳಿದರು.ಹಳಿಯಾಳ ಬಸವ ಕೇಂದ್ರದಿಂದ ಭಾನುವಾರ ಪಟ್ಟಣದಲ್ಲಿನ ಉಪ-ಕಾರಾಗೃಹದಲ್ಲಿ ಆಯೋಜಿಸಿದ ಬಸವ ಪಂಚಮಿ ಹಾಲಿನ ಮಹತ್ವವನ್ನು ಸಾರುವ ಕೈದಿಗಳಿಗೆ ಹಾಲು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಚನಕಾರರು ಪ್ರತಿಯೊಂದು ಆಚರಣೆ ಮತ್ತು ನಂಬಿಕೆಯ ಹಿಂದಿರುವ ತಾತ್ವಿಕ ಅರ್ಥವನ್ನು ಪ್ರಶ್ನಿಸುವ ಹಾಗೂ ವಿಚಾರ ಮಾಡುವ ಮನೋಭಾವವನ್ನು ಸಮಾಜಕ್ಕೆ ನೀಡಿದರು. ಶರಣರ ಸಾಹಿತ್ಯವು ಸತ್ಯ, ಸಮಾನತೆ, ಕಾಯಕ, ದಾಸೋಹ ಹಾಗೂ ವೈಚಾರಿಕತೆಯ ತಳಹದಿಯ ಮೇಲೆ ನಿಂತಿದ್ದು, ಇಂದಿನ ಸಮಾಜದಲ್ಲಿಯೂ ವೈಜ್ಞಾನಿಕ ಮನೋಭಾವ ಬೆಳೆಸಲು ವಚನ ಸಾಹಿತ್ಯದ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬೊಂಬೆಯಾಟ ತಜ್ಞ ಪ್ರೌಢಶಾಲಾ ಶಿಕ್ಷಕ ಸಿದ್ದಪ್ಪ ಬಿರಾದಾರ್ ಮಾತನಾಡಿ, ಕಲ್ಲ ನಾಗರ ಕಂಡರೆ ಹಾಲೆರೆಂಬರಯ್ಯ, ದಿಟ್ಟ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನದ ಆಶಯವನ್ನು ತಿಳಿಸಿದರು.
ವಚನಕಾರರು ಮೂಢನಂಬಿಕೆ ಪ್ರಶ್ನಿಸಿ, ಆಚರಣೆಗಳ ಹಿಂದಿನ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಅರಿತುಕೊಳ್ಳುವಂತೆ ಸಮಾಜಕ್ಕೆ ನೀಡಿದ್ದಾರೆ. ಶರಣ ಸಾಹಿತ್ಯದಲ್ಲಿರುವ ವೈಚಾರಿಕ ವಿಚಾರಗಳು, ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ಸಾಮಾಜಿಕ ಸಮಾನತೆಯ ಸಂದೇಶಗಳನ್ನು ಪ್ರಸ್ತುತ ಜೀವನಕ್ಕೆ ಅನ್ವಯಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವ ಕೇಂದ್ರದ ಪ್ರಮುಖ ಪ್ರಕಾಶ ಅಂಗಡಿ ಮಾತನಾಡಿ, ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಸದಸ್ಯರಾದ ಮಹಾದೇವಿ ಅಂಗಡಿ, ಮಹಾದೇವಿ ನೇಗಿನಾಳ, ನೇಸರ್ಗಿ, ಸುಜಾತಾ ಬಿರಾದಾರ್, ಪ್ರೌಢಶಾಲಾ ಶಿಕ್ಷಕ ಬಸವರಾಜ ತುರಮುರಿ ಇದ್ದರು. ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.ಸಭಾ ಕಾರ್ಯಕ್ರಮದ ನಂತರ ಕಾರಾಗೃಹದಲ್ಲಿದ್ದ ಎಲ್ಲಾ ಕೈದಿಗಳಿಗೆ ಹಾಲು ವಿತರಿಸುವ ಮೂಲಕ ಕಾಲಿನ ಪೌಷ್ಟಿಕತೆಯ ಮಹತ್ವ ತಿಳಿಸಲಾಯಿತು.