ದೊಡ್ಡಬಳ್ಳಾಪುರ: ಡಾ.ಅನುಪಮಾ ನಿರಂಜನ ಅವರು ಕನ್ನಡದ ಅತ್ಯಂತ ಜನಪ್ರಿಯ ಲೇಖಕಿ, ಪ್ರಸಿದ್ಧ ವೈದ್ಯೆ ಮತ್ತು ಜನಪರ ಚಿಂತಕರಾಗಿದ್ದರು ಎಂದು ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ ತಿಳಿಸಿದರು

ದೊಡ್ಡಬಳ್ಳಾಪುರ: ಡಾ.ಅನುಪಮಾ ನಿರಂಜನ ಅವರು ಕನ್ನಡದ ಅತ್ಯಂತ ಜನಪ್ರಿಯ ಲೇಖಕಿ, ಪ್ರಸಿದ್ಧ ವೈದ್ಯೆ ಮತ್ತು ಜನಪರ ಚಿಂತಕರಾಗಿದ್ದರು ಎಂದು ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ ತಿಳಿಸಿದರು.

ಇಲ್ಲಿಯ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಡಾ.ಅನುಪಮ ನಿರಂಜನ‌ರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ಮೂಲದವರಾದ ಡಾ.ಅನುಪಮ‌ ನಿರಂಜನ ಅವರ ಸಾಹಿತ್ಯವು ಸಮಾಜದ ಸ್ವಾಸ್ಥ್ಯವನ್ನು ಕಾಯುವ ಮತ್ತು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುತ್ತದೆ. ವೈದ್ಯಕೀಯ ವೃತ್ತಿ ಮತ್ತು ಪ್ರಗತಿಪರ ಸಾಮಾಜಿಕ ಕಾಳಜಿಯ ಅಪೂರ್ವ ಸಮ್ಮಿಲನ ಅನುಪಮ ನಿರಂಜನ ಆಗಿದ್ದರು ಎಂದರು.

ವೈಜ್ಞಾನಿಕ ಜ್ಞಾನವನ್ನು ಸರಳ ಕನ್ನಡದಲ್ಲಿ ಜನಸಾಮಾನ್ಯರಿಗೆ ದಾಟಿಸುವ ಮೂಲಕ "ವೈದ್ಯ ಸಾಹಿತ್ಯ " ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದರು. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಬರವಣಿಗೆಯನ್ನು ಅಷ್ಟೇ ಗಂಭೀರವಾಗಿ ತೊಡಗಿಸಿಕೊಂಡರು. ಇವರ ಕಾದಂಬರಿಗಳಲ್ಲಿ ಹೆಣ್ಣಿನ ಸಮಸ್ಯೆಗಳು, ಸಾಮಾಜಿಕ ಆಳ-ಅಗಲಗಳು ಹಾಗೂ ಕೌಟುಂಬಿಕ ಸಂಬಂಧಗಳ ಚಿತ್ರಣ ಹೆಚ್ಚಾಗಿ ಕಂಡುಬರುತ್ತದೆ ಎಂದರು.

ಅನುಪಮ ನಿರಂಜನ ಅವರ ಎಳೆ ಕಾದಂಬರಿ ಕುರಿತು ಮಾತನಾಡಿದ ಲೇಖಕಿ ವಸುಂದರರೆಡ್ಡಿ, "ಎಳೆ'''''''' ಕಾದಂಬರಿ ನೇಕಾರರ ಬದುಕನ್ನು ಕುರಿತ ಕಥಾ ವಸ್ತುವಾಗಿದೆ. ನೇಕಾರರ ಬದುಕು ಮತ್ತು ಸಾಮಾಜಿಕ ವಾಸ್ತವತೆಯನ್ನು ಅತ್ಯಂತ ನೈಜವಾಗಿ ಬಿಂಬಿಸುತ್ತದೆ. ಶಿವನೂರು ಎಂಬ ಪ್ರಾದೇಶಿಕ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯಲ್ಲಿ, ಬಂಡವಾಳಶಾಹಿಗಳ ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧ ಕಾರ್ಮಿಕರು ಹೇಗೆ ಜಾಗೃತರಾಗುತ್ತಾರೆ. ಶೋಷಣೆಯ ನಡುವೆಯೂ ಹೆಣ್ಣೊಬ್ಬಳ. ಧೈರ್ಯ, ಆತ್ಮವಿಶ್ವಾಸ ಮತ್ತು ಆಕೆಯ ವೈಚಾರಿಕ ಪ್ರಜ್ಞೆಗೆ ಈ ಕಾದಂಬರಿಯಲ್ಲಿ ಧ್ವನಿ ನೀಡಲಾಗಿದೆ. ಕೌಟುಂಬಿಕ ವಿಚಾರಗಳ ಎಳೆಯನ್ನು ಒಳಗೊಂಡಿರುವ ಈ ಕೃತಿ ಮಾನವ ಸಂಬಂಧಗಳ ಏರಿಳಿತಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ ಎಂದರು.

ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಸಾಹಿತ್ಯ ಕೃತಿಗಳ ಓದು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಆಗುತ್ತದೆ. ಸೃಜನಶೀಲತೆ ಮತ್ತು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ದೈನಂದಿನ ಒತ್ತಡವನ್ನು ಕಡಿಮೆ ಮಾಡಿ, ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಮತಾ, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಎಲ್.ಸಿ.ದೇವಕಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ. ಡಿ.ಶ್ರೀಕಾಂತ್, ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಭಾರತ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಪರಿಸರ ಪ್ರಜ್ಞಾ ಕೇಂದ್ರದ ಕಾರ್ಯದರ್ಶಿ ಡಿ.ಆರ್.ನಟರಾಜು, ನಾಗದಳ ನಟರಾಜು, ವಾಣಿಗಾರಹಳ್ಳಿ ಶ್ರೀನಿವಾಸ್, ನಿಲಯಪಾಲಕ ಸಿ.ಅಣ್ಣಯ್ಯ, ಕಲಾವಿದರುಗಳಾದ ನಾಗರತ್ನಮ್ಮ, ಬಾಶೆಟ್ಡಿಹಳ್ಳಿ ಮಂಜುನಾಥ್, ದರ್ಗಾಜೋಗಿಹಳ್ಳಿ ಮಲ್ಲೇಶ್, ಮಂಜುಳ ಮುಂತಾದವರು ಭಾಗವಹಿಸಿದ್ದರು.

18ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಡಾ.ಅನುಮಪ ನಿರಂಜನ ಜನ್ಮದಿನಾಚರಣೆ ನಡೆಯಿತು.