ಹೆದ್ದಾರಿಯಲ್ಲಿ ಸ್ಕೂಟರ್‌ ವ್ಹೀಲಿಂಗ್‌: ಕಾನೂನು ಕ್ರಮಕ್ಕೆ ಒತ್ತಾಯ

| Published : Jan 11 2025, 12:48 AM IST

ಸಾರಾಂಶ

ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿನ ಯುವಕರಿಗೆ ಹಿಡಿದಿರುವ ಅಪಾಯಕಾರಿ ವ್ಹೀಲಿಂಗ್ ಮಾಡುವ ಹುಚ್ಚು ಇದೀಗ ದಾವಣಗೆರೆ ಜಿಲ್ಲಾ ಕೇಂದ್ರದಲ್ಲೂ ಕೆಲವರಿಗೆ ಹಿಡಿದಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರ ಪುಂಡಾಟದ ದೃಶ್ಯವನ್ನು ಯುವ ಬ್ರಿಗೇಡ್‌ನ ಕೆ.ಎಸ್.ಗಜೇಂದ್ರ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವೀಡಿಯೋ ವೈರಲ್ ಆಗಿದೆ.

- ಮೂವರಿದ್ದ ಬೈಕಲ್ಲಿ ವೀಡಿಯೋ ಮಾಡಿಕೊಂಡ ಗುಂಪು । ಯುವ ಬ್ರಿಗೇಡ್‌ ಮೊಬೈಲ್‌ನಲ್ಲಿ ಕಿಡಿಗೇಡಿಗಳ ಚೆಲ್ಲಾಟ ಸೆರೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿನ ಯುವಕರಿಗೆ ಹಿಡಿದಿರುವ ಅಪಾಯಕಾರಿ ವ್ಹೀಲಿಂಗ್ ಮಾಡುವ ಹುಚ್ಚು ಇದೀಗ ದಾವಣಗೆರೆ ಜಿಲ್ಲಾ ಕೇಂದ್ರದಲ್ಲೂ ಕೆಲವರಿಗೆ ಹಿಡಿದಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರ ಪುಂಡಾಟದ ದೃಶ್ಯವನ್ನು ಯುವ ಬ್ರಿಗೇಡ್‌ನ ಕೆ.ಎಸ್.ಗಜೇಂದ್ರ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವೀಡಿಯೋ ವೈರಲ್ ಆಗಿದೆ.

ಬಾಡಾ ಕ್ರಾಸ್ ತಿರುವಿನಲ್ಲಿ ಬಾಪೂಜಿ ಕ್ಯಾನ್ಸರ್ ಆಸ್ಪತ್ರೆ ಬಳಿ ಮೇಲ್ತೇಸುವೆ ಮೇಲಿನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಾಗುತ್ತಿದ್ದ ನೋಂದಣಿ ಇಲ್ಲದ ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸದ ಸವಾರ ವ್ಹೀಲಂಗ್ ಮಾಡುತ್ತಿದ್ದು, ಹಿಂಬದಿ ಕುಳಿತಿದ್ದ ಮತ್ತೊಬ್ಬ ಆತನಿಗೆ ಬೆಂಬಲ ನೀಡಿ, ಕೇಕೆ ಹೊಡೆಯುತ್ತಾ ಸಾಗುತ್ತಿದ್ದ ದೃಶ್ಯ ದಾಖಲಾಗಿದೆ.

ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ಮೂವರು ಕುಳಿತಿದ್ದ ಬೈಕ್‌ನಲ್ಲಿ ಮತ್ತೊಬ್ಬ ವೀಡಿಯೋ ಮಾಡಿಕೊಳ್ಳುತ್ತಿದ್ದ. ವ್ಹೀಲಿಂಗ್ ಮಾಡುತ್ತಿದ್ದ ಪುಂಡರು ದಾರಿಯಲ್ಲಿ ಸಾಗುತ್ತಿದ್ದ ಕಾರು ಸೇರಿದಂತೆ ಲಘು ವಾಹನಗಳು, ಭಾರಿ ವಾಹನಗಳಿಗೆ ಅಡ್ಡ ಬರುವುದು, ಇತರೆ ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ತೊಂದರೆ ನೀಡುವಂತೆ ಬೇಕಂತಲೇ ಅಡ್ಡ ಬರುವುದು, ಕಾರುಗಳಿಗೆ ಅಡ್ಡಾದಿಡ್ಡಿ ಬರುವುದನ್ನು ಮಾಡುತ್ತಿದ್ದರು ಎಂದು ಆರೋಪ ಕೇಳಿಬಂದಿವೆ.

ಪ್ರತಿ ಕ್ಷಣವೂ ಅತಿ ವೇಗದಲ್ಲಿ ಲಘು ವಾಹನದಿಂದ ಭಾರಿ ವಾಹನಗಳ ಸಂಚಾರ ದಟ್ಟಣೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನಿಷ್ಠ ಹೆಲ್ಮೆಟ್ ಸಹ ಧರಿಸದ, ಗಟ್ಟಿಮುಟ್ಟಾಗಿಯು ಇಲ್ಲದ, ನಂಬರ್‌ ಪ್ಲೇಟ್‌ ಇಲ್ಲದ, ಗುಜರಿ ಪಾಲಾಗುವಂತಿರುವ ಸ್ಕೂಟರ್‌ನ ಮುಂದಿನ ಚಕ್ರವನ್ನು 3-4 ಸಲ ಗಾಳಿಯಲ್ಲಿ ತೇಲಿಸುತ್ತ, ಚಾಲನೆ ಮಾಡುತ್ತಿರುವ ಅಪಾಯಕಾರಿ ದುಸ್ಸಾಹಸ ಕಂಡ ಅನ್ಯ ವಾಹನಗಳ ಚಾಲಕರು ಭೀತಿಗೊಂಡರು. ವ್ಹೀಲಿಂಗ್‌ ಮಾಡುತ್ತಿರುವ ಕಿಡಿಗೇಡಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರಿ ಪೊಲೀಸರು ಪತ್ತೆ ಮಾಡಿ, ತಕ್ಕ ಪಾಠ ಕಲಿಸಬೇಕಿದೆ ಎಂಬ ಆಗ್ರಹ ಸಹ ಕೇಳಿಬರುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸ್ಕೂಟರ್ ಕಿಡಿಗೇಡಿಗಳ ವ್ಹೀಲಿಂಗ್ ಪುಂಡಾಟದ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

- - -

-10ಕೆಡಿವಿಜಿ3, 4, 5: ದಾವಣಗೆರೆ ಹೊರವಲಯದ ಕ್ಯಾನ್ಸರ್ ಆಸ್ಪತ್ರೆ ಬಳಿ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಿರುವ ಕಿಡಿಗೇಡಿಗಳು.