ಸಾರಾಂಶ
ಐಟಿಐ ಕಾಲೇಜುಗಳ ವರ್ಕ್‌ಶಾಪ್‌ಗಳು ಟಿನ್ ಶೆಡ್‌ನಿಂದ ಕೂಡಿವೆ. ಅಲ್ಲಿ ಉರಿ ಬಿಸಿಲಿನಿಂದ ಕಾಲೇಜು ಸಮಯದಲ್ಲಿ ಭಾರೀ ಶಕೆಯಾಗುತ್ತಿದ್ದು, ಕೂಡಲೇ ಕಾಲೇಜಿನ ಸಮಯ ಬದಲಾವಣೆ ಮಾಡುವಂತೆ ಐಟಿಐ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಐಟಿಐ ಕಾಲೇಜುಗಳ ವರ್ಕ್‌ಶಾಪ್‌ಗಳು ಟಿನ್ ಶೆಡ್‌ನಿಂದ ಕೂಡಿವೆ. ಅಲ್ಲಿ ಉರಿ ಬಿಸಿಲಿನಿಂದ ಕಾಲೇಜು ಸಮಯದಲ್ಲಿ ಭಾರೀ ಶಕೆಯಾಗುತ್ತಿದ್ದು, ಕೂಡಲೇ ಕಾಲೇಜಿನ ಸಮಯ ಬದಲಾವಣೆ ಮಾಡುವಂತೆ ಐಟಿಐ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಕಲಬುರಗಿ ಜಿಲ್ಲಾ ಸಮಿತಿ ಆಸರೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಐಟಿಐ ಮಕ್ಕಳು, ಕಳೆದೊಂದು ವಾರಕ್ಕಿಂತ ಹೆಚ್ಚಿನ ಅವಧಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಜನ ಜಾನುವಾರು ತತ್ತರಿಸುವಂತಾಗಿದೆ.
ಜಿಲ್ಲೆಯ ಅನೇಕ ಐಟಿಐ ಕಾಲೇಜುಗಳ ವರ್ಕಶಾಪ್‌ಗಳು ಟಿನ್ (ಪತ್ರಸ್)ನಿಂದ ನಿರ್ಮಿಸಿರುವುದರಿಂದ ಭಾರೀ ಶಕೆಯಿಂದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೂಡಲು ಆಗುತ್ತಿಲ್ಲ. ಈ ಕೂಡಲೇ ಟಿನ್ ಇರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮತ್ತು ಕಾಲೇಜಿನ ಸಮಯ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.ಅನೇಕ ಕಾಲೇಜಗಳಲ್ಲಿ ಕುಡಿಯಲು ಇಟ್ಟಿರುವ ನೀರು ಕಾದು ಕೆಂಡವಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದೆ. ಆದ್ದರಿಂದ ನೀರು ಕುಡಿಯಲು ಸಹ ಆಗುತ್ತಿಲ್ಲ. ಕೆಲ ಕಾಲೇಜುಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಸಹ ಇಲ್ಲ. ದಿನನಿತ್ಯ ಕಾಲೇಜು ಹೋಗಲು ಪರದಾಡುವ ಪರಿಸ್ಥಿತಿ ಇದೆ. ಆದ್ದರಿಂದ ಕಾಲೇಜಿನ ಸಮಯ ಬೆ.8 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ.
ಕೂಡಲೇ ಕಾಲೇಜುವಾರು ಸಮಸ್ಯೆ ಪರಿಶೀಲಿಸಿ ಪರಿಹರಿಸಬೇಕು ಎಂದು ಎಸ್ಎಫ್ಐ ಕಲಬುರಗಿ ಜಿಲ್ಲಾ ಸಮಿತಿ ಸಹಯೋಗದಲ್ಲಿ ಡಿಸಿಯವರಿಗೆ ಮನವಿ ಸಲ್ಲಿಸಿದ್ದಾರೆ. ಬೇಡಿಕೆಗೆ ನಿರ್ಲಕ್ಷ್ಯ ಧೋರಣೆ ತೋರಿದರೆ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.ಎಸ್‌ಎಫ್‌ಐ ಕಲ್ಬುರ್ಗಿ ಜಿಲ್ಲಾ ಸಂಚಾಲಾಕಿ ಸುಜಾತಾ, ಸಹ ಸಂಚಾಲಕರಾದ ಸಿದ್ದು, ಅಭಿಷೇಕ್, ಅಜಯ್ ಸೇರಿ ಅನೇಕರು ಹೋರಾಟದಲ್ಲಿದ್ದರು.