ವಸುದೈವ ಕುಟುಂಬಕಂ, ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆ ತಾಲೂಕಿನ ಅರೇಮೇರಿ ಎಸ್ಎಂಎಸ್ ವಿದ್ಯಾಪೀಠ ಶಾಲೆಯಲ್ಲಿ ವಸುದೈವ ಕುಟುಂಬಕಂ, ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ವಾರ್ಷಿಕೋತ್ಸವವು, ಸಂಸ್ಥೆಯ ವಿಶಾಲ ಮನೋಭಾವ ಹಾಗೂ ಧ್ಯೇಯವನ್ನು ಸಾರುತ್ತದೆ. ಪ್ರಪಂಚವೇ ಒಂದು ಕುಟುಂಬ ಎಂದು ಸಾರುವ ಈ ಧ್ಯೇಯ ವಾಕ್ಯವು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ದಶಕಗಳಿಂದ ಅರಮೇರಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಸೌಲಭ್ಯವನ್ನು ಒದಗಿಸುತ್ತ ವಿದ್ಯಾರ್ಜನೆ ಮಾಡುತ್ತಾ ಬಂದಿದೆ. ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಈಗಾಗಲೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಪಡೆದು, ನಾಡಿನ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.ಇಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದ ಶಾಸಕರು, ಸಂಸ್ಥೆಯ ಆದರ್ಶವನ್ನು ಎಲ್ಲರೂ ಪಾಲಿಸುತ್ತಾ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಶುಭ ಹಾರೈಸಿದರು. ವಾರ್ಷಿಕೋತ್ಸವದಲ್ಲಿ ಸಂಭ್ರಮವೇ ಸುತ್ತಿರುವ ವಿದ್ಯಾರ್ಥಿಗಳು ಇದೇ ಸಂಭ್ರಮವನ್ನು ಮುಂದಿನ ದಿನ ಪರೀಕ್ಷೆಯಲ್ಲಿ ಸಹ ಉತ್ತಮ ಅಂಕ ಗಳಿಸುವತ್ತ ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಆರಮೇರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.