ಕಂದಕೂರು ಗ್ರಾಮದ ಕೊಂಡಮಾಯಿ ಗುಡ್ಡದಲ್ಲಿ ಚೇಳುಗಳಿಗೆ ಪೂಜೆ ! । ಜೀವಂತ ಚೇಳುಗಳ ಜೊತೆ ಆಟ
ಕನ್ನಡಪ್ರಭ ವಾರ್ತೆ ಯಾದಗಿರಿಇಲ್ಲಿಗೆ ಸಮೀಪದ, ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಕೊಂಡಮಾಯಿ ಗುಡ್ಡದಲ್ಲಿ ಪ್ರತಿವರ್ಷದ ನಾಗರಪಂಚಮಿಯಂದು ಮಾತ್ರ ನಡೆಯುವ ಚೇಳಿನ ಜಾತ್ರೆ ವಿಶೇಷ. ಈ ದಿನದಂದು ಭಕ್ತರು ಹಾವಿಗೆ ಪೂಜೆಗೈದು ಹಾಲೆರೆಯುವುದು ಸಾಮಾನ್ಯವಾದರೆ, ಇಲ್ಲಿ ಚೇಳಿಗೆ ಅಗ್ರಪೂಜೆ ! ಚೇಳುಗಳನ್ನು ಮೈಮೇಲೆ ಬಿಟ್ಟುಕೊಂಡು ಸರಸವಾಡೋದು ಇಲ್ಲಿನ ದೃಶ್ಯಗಳು ಮೈನವಿರೇಳಿಸುತ್ತವೆ.
ಎಂದಿನಂತೆ, ಈ ಬಾರಿಯೂ ಸಹ ಸೋಮವಾರ ಬೆಳಿಗ್ಗೆಯಿಂದಲೇ ಕಂದಕೂರಿನ ಕೊಂಡಮಾಯಿ ಗುಡ್ಡದತ್ತ ಸಾವಿರಾರು ಜನರು ಧಾವಿಸಿದರು. ಪೂಜೆಗೈಯ್ಯುವ ಭಕ್ತರ ಜೊತೆ ಜೀವಂತ ಚೇಳುಗಳ ಮೈಮೇಲೆ ಬಿಟ್ಟುಕೊಳ್ಳುವ ಜನರ ಕುತೂಹಲ ಮನೆ ಮಾಡಿತ್ತು.ಕೊಂಡಮಾಯಿ ಗುಡ್ಡದ ಇತಿಹಾಸ ಶತಮಾನಗಳಿಂದ ಅನ್ನುತ್ತಾರಾದರೂ, ಕಳೆದ ಕೆಲವು ದಶಕಗಳಿಂದ ಚೇಳಿನೆ ಜಾತ್ರೆಗೆ ಮಹತ್ವ ಸಿಕ್ಕಿದ್ದು, ಭಕ್ತಿ ಭಾವದ ಜೊತೆಗೆ ಅಚ್ಚರಿಯ ನೋಡಲು ರಾಜ್ಯದ ವಿವಿಧೆಡೆಯಿಂದ ಸೇರಿದಂತೆ, ನೆರೆಯ ತೆಲಂಗಾಣ, ಆಂಧ್ರ, ಮಹಾರಾಷ್ಟ್ರದಿಂದ ನಾಗರಪಂಚಮಿಯಂದು ಇಲ್ಲಿಗೆ ಜನರು ಆಗಮಿಸುತ್ತಾರೆ.
ಕೊಂಡಮಾಯಿ ಗುಡ್ಡದ ಮೇಲಿನ ದೇವಿ ಗುಡಿಗೆ ಪೂಜೆ ಸಲ್ಲಿಸಿದ ನಂತರ, ಗುಡ್ಡದ ಸಂದುಗೊಂದುಗಳಿಂದ ಹೊರಬರುವ ಚೇಳುಗಳನ್ನು ಹಿಡಿದು ಜನರು ಮೈಮೇಲೆ ಬಿಟ್ಟುಕೊಂಡು ಅಚ್ಚರಿಪಟ್ಟರು. ಮಕ್ಕಳೂ, ಮಹಿಳೆಯರೆನ್ನದೇ ಅನೇಕರು ಈ ಕುತೂಹಲಕ್ಕೆ ಸಾಕ್ಷಿಯಾದರಲ್ಲದೆ, ಸ್ವತ: ಮೈಮೇಲೆ ಚೇಳು ಬಿಟ್ಟುಕೊಂಡು ಸಂಭ್ರಮಿಸಿದರು. ಈ ಚೇಳುಗಳು ಯಾರಿಗೂ ಕಚ್ಚೋಲ್ಲ ಎಂಬ ನಂಬಿಕೆಯಿದೆ. ಕಚ್ಚಿದರೂ, ಅಲ್ಲಿನ ದೇವಿ ಗರ್ಭಗುಡಿಯಲ್ಲಿನ ಆಧಾರ ಹಚ್ಚಿದರೆ ನೋವು ಮಾಯವಾಗುತ್ತದೆ ಅಂತಾರೆ ಯಾದಗಿರಿಯ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ್.
ಚೇಳುಗಳನ್ನು ಹುಡುಕಿ ತೆಗೆಯುವ ಜನರಲ್ಲಿ ಕೆಲವರು ಕೈ, ಮುಖ, ಕುತ್ತಿಗೆ ಮೇಲೆ ಹಾಕಿಕೊಂಡರೆ, ಇನ್ನೂ ಕೆಲವರು ನಾಲಿಗೆಯ ಮೇಲೆ ಚೇಳು ಬಿಟ್ಟುಕೊಳ್ಳುತ್ತಾರೆ. ಮೈಜುಮ್ಮೆನ್ನಿಸುವ ಈ ಸಾಹಸ ಅಚ್ಚರಿ ಜೊತೆಗೆ ಆತಂಕವನ್ನೂ ಮೂಡಿಸುತ್ತದೆ. ನಾಗರಪಂಚಮಿ ಮರುದಿನ ಈ ಚೇಳುಗಳು ಮತ್ತೇ ಸಿಗೋಲ್ಲ ಅನ್ನಲಾಗುತ್ತದೆ.
ಕೊಂಡಮಾಯಿ ಗುಡ್ಡದ ದೇವಿಯ ಪವಾಡ ಎಂದು ಭಕ್ತರ ಅಂಬೋಣವಾದರೆ, ಈ ವೇಳೆ ಸ್ತುಪ್ತಾವಸ್ಥೆಯಲ್ಲಿ ಸರೀಸೃಪಗಳು ಕಚ್ಚುವುದಿಲ್ಲ. ಹೀಗಾಗಿ, ಇದು ಪವಾಡವಲ್ಲ ಅನ್ನೋದು ಕೆಲವರ ತರ್ಕ. ಒಟ್ಟಿನಲ್ಲಿ, ಕಂದಕೂರಿನ ಕೊಂಡಮಾಯಿ ಗುಡ್ಡಕ್ಕೆ ಚೇಳಿನ ಜಾತ್ರೆಯ ಕುತೂಹಲ ಅರಿಯಲು ಜನರು ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಆಗಮಿಸುತ್ತಿರುವುದು ಹೆಚ್ಚುತ್ತಿದೆ ಅಂತಾರೆ ಗ್ರಾಮದ ಬಸರೆಡ್ಡಿ ವಕೀಲರು.------ಬಾಕ್ಸ್....
ಕೈಮೇಲೆ ಚೇಳು ಬಿಟ್ಟುಕೊಂಡು ಎಸ್ಪಿ ಅಚ್ಚರಿ !ಕೊಂಡಮಾಯಿ ಗುಡ್ಡದಲ್ಲಿ ಚೇಳಿನ ಜಾತ್ರೆ ಅಚ್ಚರಿ ಅರಿಯಲು ಖುದ್ದು ಕುಟುಂಬ ಸಮೇತ ಇಲ್ಲಿಗಾಗಮಿಸಿದ್ದ ಎಸ್ಪಿ ಪೃಥ್ವಿಕ್, ಅಚ್ಚರಿ ಕಂಡು ದಂಗಾದರು. ಸಾವಿರಾರು ಜನರ ಮಧ್ಯೆ, ತಾವೂ ಸಹ ಕೈಮೇಲೆ ಚೇಳು ಇಟ್ಟುಕೊಂಡು ನೋಡಿದ ಎಸ್ಪಿ ಪೃಥ್ವಿಕ್, ಮಗುವಿಗೂ ಸಹ ಚೇಳಿನ ಅನುಭವ ನೀಡಿಸಿದಂತಿತ್ತು.
--------17ವೈಡಿಆರ್1 : ಕಂದಕೂರಿನ ಕೊಂಡಮಾಯಿ ಗುಡ್ಡದಲ್ಲಿನ ಚೇಳಿನ ಜಾತ್ರೆಯ ವೇಳೆ ಜೀವಂತ ಚೇಳನ್ನು ಹಣೆಯ ಮೇಲೆ ಇಟ್ಟುಕೊಂಡ ವರ್ಷಾರೆಡ್ಡಿ.
17ವೈಡಿಆರ್2: ಕಂದಕೂರಿನ ಕೊಂಡಮಾಯಿ ಗುಡ್ಡದಲ್ಲಿನ ಚೇಳಿನ ಜಾತ್ರೆಯ ವೇಳೆ ಜೀವಂತ ಚೇಳು ಕೈಲಿ ಹಿಡಿದುಕೊಂಡು ಸಂಭ್ರಮಿಸಿದ ಯುವತಿಯರ ತಂಡ.17ವೈಡಿಆರ್3 : ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಚೇಳು ಹಿಡಿದು ಅಚ್ಚರಿ ವ್ಯಕ್ತಪಡಿಸಿದರು.
17ವೈಡಿಆರ್4 : ಕಂದಕೂರಿನ ಕೊಂಡಮಾಯಿ ಗುಡ್ಡದಲ್ಲಿನ ಚೇಳಿನ ಜಾತ್ರೆಯ ವೇಳೆ ಜೀವಂತ ಚೇಳು ಕೈಲಿ ಹಿಡಿದುಕೊಂಡ ಸಂಭ್ರಮಿಸಿದ ಯುವಕರ ತಂಡ.