ಆಲೂರಿನಲ್ಲಿ ಸ್ಕೌಟ್ಸ್ ಹಾಗೂ ಗೈಡ್ಸ್‌ ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷಾ ಶಿಬಿರ

| Published : Oct 02 2024, 01:18 AM IST

ಆಲೂರಿನಲ್ಲಿ ಸ್ಕೌಟ್ಸ್ ಹಾಗೂ ಗೈಡ್ಸ್‌ ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷಾ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ್ ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ರೂಪಿಸುವುದರ ಜೊತೆಗೆ ಅವರಲ್ಲಿ ಜೀವನ ಕೌಶಲಗಳನ್ನು ವೃದ್ಧಿಸುತ್ತದೆ ಎಂದು ಹಾಸನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು. ಆಲೂರಿನಲ್ಲಿ ಮಕ್ಕಳ ತೃತೀಯ ಸೋಪಾನ ಪರೀಕ್ಷಾ ಶಿಬಿರದಲ್ಲಿ ಮಾತನಾಡಿದರು.

ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಜೀವನ ಕೌಶಲ ವೃದ್ಧಿಸುತ್ತದೆ: ಸುರೇಶ್ ಗುರೂಜಿ

ಕನ್ನಡಪ್ರಭ ವಾರ್ತೆ ಆಲೂರು

ಭಾರತ್ ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ರೂಪಿಸುವುದರ ಜೊತೆಗೆ ಅವರಲ್ಲಿ ಜೀವನ ಕೌಶಲಗಳನ್ನು ವೃದ್ಧಿಸುತ್ತದೆ ಎಂದು ಹಾಸನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಹಾಗೂ ಸ್ಥಳೀಯ ಸಂಸ್ಥೆ ಆಲೂರು ಸಹಯೋಗದಲ್ಲಿ ಆಲೂರು ತಾಲೂಕು ಭೈರಾಪುರದ ಬೆಥಸ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ತೃತೀಯ ಸೋಪಾನ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಹಂತದ ಪರೀಕ್ಷಾ ಶಿಬಿರದಲ್ಲಿ ತೃತೀಯ ಸೋಪಾನ ಪರೀಕ್ಷೆಗೆ ಸಂಬಂಧಿಸಿದಂತೆ ಲಿಖಿತ ಹಾಗೂ ಮೌಖಿಕ ಪ್ರಶ್ನೆಗಳನ್ನು ಕೇಳಲಾಗುವುದು. ಸಮರ್ಥವಾಗಿ ಉತ್ತರಿಸಿ ಉತ್ತೀರ್ಣರಾಗಿ ರಾಜ್ಯ ಸಂಸ್ಥೆ ಹಮ್ಮಿಕೊಳ್ಳುವ ರಾಜ್ಯ ಪುರಸ್ಕಾರ್ ಪರೀಕ್ಷಾ ಶಿಬಿರಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳ ಸಂಖ್ಯೆ ಅಧಿಕವಾಗಿದ್ದಾಗ ಜಿಲ್ಲಾ ಹಂತದ ಪರೀಕ್ಷಾ ಶಿಬಿರಗಳನ್ನು ಸ್ಥಳೀಯ ಸಂಸ್ಥೆಗಳು ಹಮ್ಮಿಕೊಳ್ಳುವುದರಿಂದ ಆಯಾಯ ತಾಲೂಕಿನ ಮಕ್ಕಳಿಗೆ ಅನುಕೂಲವಾಗುತ್ತದೆ. ಕೊಟ್ರೇಶ್ ಎಸ್. ಉಪ್ಪಾರ್‌ ಆಲೂರು ತಾಲೂಕು ಕಾರ್ಯದರ್ಶಿಯಾದ ನಂತರ ತಾಲೂಕಿನಲ್ಲಿ ಸ್ಕೌಟ್ಸ್ ಗೈಡ್ಸ್ ತುಂಬಾ ಕ್ರಿಯಾಶೀಲವಾಗಿ ನಡೆಯುತ್ತಿದೆ. ಯೂನಿಟ್ ಹಾಗೂ ಮಕ್ಕಳ ಸಂಖ್ಯೆಯೂ ಸಾಕಷ್ಟು ಅಭಿವೃದ್ಧಿಯಾಗಿದೆ.

ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಧರಿಸುವ ಸಮವಸ್ತ್ರವೇ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಸಮವಸ್ತ್ರಕ್ಕೆ ತಕ್ಕಂತೆ ನಮ್ಮ ನಡೆನುಡಿಯೂ ಸಹ ಇರಬೇಕು. ಗುರುಹಿರಿಯರಿಗೆ ಗೌರವಿಸುವುದಲ್ಲದೇ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಆದರ್ಶಮಯವಾಗಿ ಬದುಕಬೇಕು. ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಂಯಮ, ಶಾಂತಿ, ಸಹಾಕಾರ ಮನೋಧೋರಣೆ, ಸಹನಶೀಲತೆ ಮುಂತಾದ ಮಹತ್ತರ ಅಂಶಗಳನ್ನು ಬಿತ್ತುತ್ತದೆ. ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಕ್ಯವೇ ಸದಾ ಸಿದ್ಧವಾಗಿರು. ಅಂದರೆ ಸಮಾಜದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸಲು ಮಕ್ಕಳನ್ನು ಸನ್ನದ್ಧಗೊಳಿಸುತ್ತದೆ ಎಂದರು.

ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ಎಂ. ಎಸ್. ಪ್ರಕಾಶ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಹುಟ್ಟಿದ್ದೇ ಬಾಲಕ ಹಾಗೂ ಬಾಲಕಿಯರಿಗಾಗಿ. ಕಬ್, ಬುಲ್‌ಬುಲ್, ಸ್ಕೌಟ್, ಗೈಡ್, ರೋವರ್ ಹಾಗೂ ರೇಂಜರ್‌ ಎಂಬ ವಿವಿಧ ವಯೋಮಾನದ ಹಂತದ ಮಕ್ಕಳಿಗೆ ಜೀವನ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಅರಿವನ್ನುಂಟುಮಾಡಿ ಉತ್ತಮ ನಾಗರಿಕರನ್ನಾಗಿ ರೂಪಿಸುವುದೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಗುರಿಯಾಗಿದೆ. ಮಕ್ಕಳು ಆಯಾ ಹಂತದ ಕಲಿಕೆಯನ್ನು ಆಸಕ್ತಿ ಹಾಗೂ ಶ್ರದ್ಧೆಯಿಂದ ಕಲಿತರೆ ಇಡೀ ಜೀವನದುದ್ದಕ್ಕೂ ಇಲ್ಲಿನ ಮೌಲ್ಯಗಳು ಸಾಗಿ ಬರುತ್ತವೆ ಎಂದರು.

ವೇದಿಕೆಯಲ್ಲಿ ರಾಜ್ಯ ಸಂಘಟನಾ ಸಹಾಯಕ ಆಯುಕ್ತೆ ಎಚ್. ಎಂ. ಪ್ರಿಯಾಂಕ, ಜಿಲ್ಲಾ ಖಜಾಂಚಿ ರಮೇಶ್, ಹಿರಿಯ ಗೈಡರ್ ಎಚ್.ಜಿ.ಕಾಂಚನಮಾಲ, ತಾಲೂಕು ಕಾರ್ಯದರ್ಶಿ ಎಂ. ಬಾಲಕೃಷ್ಣ, ಸ್ಕೌಟ್ ಮಾಸ್ಟರ್ ಪಿ. ಚಂದ್ರು, ಲೇಡಿ ಸ್ಕೌಟ್ ಮಾಸ್ಟರ್ ಕಾವ್ಯ ಮತ್ತು ಇತರರು ಇದ್ದರು.