ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಚಟುವಟಿಕೆಗಳು ಸಹಕಾರಿಯಾಗಿವೆ. ಸದಾ ಚಟುವಟಿಕೆಯಿಂದ, ಆರೋಗ್ಯವಂತರಾಗಿರಲು ಆಟಗಳನ್ನು ಆಡಬೇಕು. ಯೋಗ, ಧ್ಯಾನವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್ ಹೇಳಿದ್ದಾರೆ.

- ರಾಜ್ಯ ಪುರಸ್ಕಾರ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಚಟುವಟಿಕೆಗಳು ಸಹಕಾರಿಯಾಗಿವೆ. ಸದಾ ಚಟುವಟಿಕೆಯಿಂದ, ಆರೋಗ್ಯವಂತರಾಗಿರಲು ಆಟಗಳನ್ನು ಆಡಬೇಕು. ಯೋಗ, ಧ್ಯಾನವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಬಾಪೂಜಿ ಹೈಯರ್ ಪ್ರೈಮರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ನಡೆದ ರಾಜ್ಯ ಪುರಸ್ಕಾರ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ನಿಮ್ಮ ಮುಂದೆ ಒಬ್ಬ ಇನ್‌ಸ್ಪೆಕ್ಟರ್‌ ಆಗಿ ನಿಲ್ಲಲು ನನಗೆ ಸ್ಕೌಡ್ ಅಂಡ್ ಗೈಡ್ ಕಾರಣ. ನಾನೂ ಸ್ಕೌಟ್ ಗೈಡ್, ಎನ್‌ಸಿಸಿಯಲ್ಲಿ ಭಾಗವಹಿಸಿದ್ದೆ. ನಿಮಗೆ ಇಲ್ಲಿ ಕೊಡುವ ತರಬೇತಿಯನ್ನು ಶ್ರದ್ಧೆಯಿಂದ ಕಲಿಯಿರಿ. ನಿಮ್ಮ ಜೀವನ ಕೌಶಲ್ಯಗಳು ನಾಳೆ ನಿಮ್ಮ ಶಾಲೆ ಮುಗಿದ ನಂತರವೂ ಇಲ್ಲಿ ಕಲಿತ ಮೌಲ್ಯಗಳು, ವಿಷಯಗಳು ಜೀವನಕ್ಕೆ ಸಹಾಯಕವಾಗಲಿವೆ ಎಂದರು.

ನಿಮ್ಮ ಅಂಕಪಟ್ಟಿ ಜೊತೆಗೆ ವೈಯಕ್ತಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ಓದಿ ಐಎಎಸ್, ಐಪಿಎಸ್ ಆಗಬೇಕೆಂದಿಲ್ಲ. ನೀವು ಯಾವುದೇ ಕ್ಷೇತ್ರಕ್ಕೆ ಹೋಗಿ ನಿಮಗೆ ಸ್ಕೌಟ್ಸ್ ಗೈಡ್ಸ್, ಎನ್‌ಸಿಸಿಯಲ್ಲಿ ಕಲಿಸಿದ ಶಿಸ್ತು, ಶ್ರದ್ಧೆ, ದೇಶಭಕ್ತಿ, ಗುರು- ಹಿರಿಯರಿಗೆ ಗೌರವಿಸುವ ಮನೋಭಾವ, ಕಾಳಜಿ ಕೊನೆವರೆಗೂ ಬಳಕೆಗೆ ಬರುತ್ತವೆ. ಜೀವನದಲ್ಲಿ ಏನಾಗಬೇಕೆಂದು ಕನಸು ಕಾಣುತ್ತೀರೋ ಅದು ನನಸಾಗುವವರೆಗೂ ಪ್ರಯತ್ನಿಸಿ. ಅಂದಿನ ಓದು, ಬರೆಯುವಿಕೆಯನ್ನು ಅಂದೇ ಕಲಿಯಿರಿ. ಉತ್ತಮ ಆರೋಗ್ಯದ ಕಡೆಗೆ ಗಮನಹರಿಸಿ, ಸದಾ ಸಂತೋಷವಾಗಿ ಇರಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ರಾಜ್ಯ ಪುರಸ್ಕಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಮಕ್ಕಳು ಓದಿನ ಜೊತೆಗೆ ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‌ಸಿಸಿಗಳಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಯುವಜನತೆಯಲ್ಲಿದೆ. ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಹಾಗೂ ಸೇವಾಮನೋಭಾವ ಬೆಳೆಸುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ವಿದ್ಯಾರ್ಥಿಗಳು ಪ್ರಶಸ್ತಿಯ ಗೌರವವನ್ನು ಕಾಪಾಡಿಕೊಂಡು ಮುಂದೆಯೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ಮಾತನಾಡಿ, ಸ್ಕೌಟ್ ಅಂಡ್ ಗೈಡ್ ತರಬೇತಿ, ಸೇವಾ ಚಟುವಟಿಕೆಗಳು ಮತ್ತು ವಿವಿಧ ಕೌಶಲ್ಯಗಳ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಇಂದು ಪಡೆದಿರುವ ಪ್ರಶಸ್ತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಸ್ಫೂರ್ತಿ ಆಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೈಡ್ ಆಯುಕ್ತೆ ಶಾರದಾ ಮಾಗಾನಹಳ್ಳಿ, ಶಾಲೆ ಪ್ರಾಚಾರ್ಯೆ ಜೆ.ಎಸ್. ವನಿತಾ, ಎಸ್‌ಜಿವಿ ಅಶ್ವಿನಿ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ರವೀಂದ್ರ ಸ್ವಾಮಿ, ಪಟೇಲ್ ವೀರಪ್ಪ ಶಾಲೆ ಮುಖ್ಯಸ್ಥೆ ಪ್ರಣಿತಾ ಗಿರೀಶ್, ವೀರಶೈವ ಸಮಾಜದ ಮುಖಂಡರಾದ ಯಶೋಧ ಪ್ರಕಾಶ, ಗೈಡ್ ಕ್ಯಾಪ್ಟನ್ ಮಂಜುಳಾ, ಸ್ಕೌಟ್ ಶಿಕ್ಷಕ ಹನುಮಂತಪ್ಪ ಉಳ್ಳಾಗಡ್ಡಿ ಇತರರು ಇದ್ದರು.

- - -

-26ಕೆಡಿವಿಜಿ31:

ದಾವಣಗೆರೆಯಲ್ಲಿ ಶನಿವಾರ ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ನಡೆದ ರಾಜ್ಯ ಪುರಸ್ಕಾರ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್ ಉದ್ಘಾಟಿಸಿದರು.