ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್- ರೇಂಜರ್ಸ್, ಕಬ್ಸ್ ಮತ್ತು ಬುಲ್ ಬುಲ್ ಘಟಕಗಳನ್ನು ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕನನ್ನಾಗಿ ಮಾಡುವುದೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಧ್ಯೇಯೋದ್ದೇಶವಾಗಿದೆ. ಪ್ರತಿಯೊಬ್ಬರೂ ಇದರ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸೇರಲು ತುಂಬಾ ಅವಕಾಶಗಳಿವೆ. ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಅಭಿಪ್ರಾಯಪಟ್ಟರು.ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್- ರೇಂಜರ್ಸ್, ಕಬ್ಸ್ ಮತ್ತು ಬುಲ್ ಬುಲ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರದಲ್ಲಿ ಜೀವಿಸುತ್ತಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಎಲ್ಲ ಪ್ರಾಣಿ ಪಕ್ಷಿಗಳನ್ನು, ಮನುಷ್ಯರನ್ನು ಪ್ರೀತಿಯಿಂದ ಕಾಣಬೇಕು. ಇದನ್ನು ಸ್ಕೌಟ್ಸ್- ಗೈಡ್ಸ್ ಕಲಿಸುತ್ತದೆ. ದೇವರಲ್ಲಿ ನಂಬಿಕೆ, ಮಾನಸಿಕ ಹಾಗೂ ದೈಹಿಕವಾಗಿ ಸದೃಢನನ್ನಾಗಿಸುವುದು, ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸುವುದು ಇದರ ಮುಖ್ಯಉದ್ದೇಶವಾಗಿದೆ. ಸ್ಕೌಟ್ಸ್ ಸಮವಸ್ತ್ರ ಧರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬರುತ್ತದೆ. ಈ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಸ್ಕೌಟ್ಸ್ ಗೈಡ್ಸ್‌ಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೇರಬೇಕು.
ಆ ಮೂಲಕ ಕ್ರೀಯಾಶೀಲ ವ್ಯಕ್ತಿತ್ವ ರೂಪಿಸಿಕೊಂಡು ಪರಿಸರವನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಯಾರು ಬೇರೆಯವರಿಗೋಸ್ಕರ ಬದುಕುತ್ತಾರೋ ಅವರ ಹೆಸರು ಅಜರಾಮರವಾಗಿರುತ್ತದೆ. ಬದುಕು ಹೇಗಿದೆ ಅದನ್ನು ನಾವು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನುಇಂತಹ ಘಟಕಗಳ ಮೂಲಕ ಕಲಿಯಬೇಕು. ದೇಶಕ್ಕೆ ನಿಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಕೊಡುಗೆಗಳನ್ನು ನೀಡಿ. ಸಮಾಜ ಸೇವೆ ಬದುಕಿನ ಮೂಲ ಮಂತ್ರವಾಗಲಿ ಎಂದರು.ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟಕ ಪ್ರಭಾಕರ್ ಭಟ್, ದಕ್ಷಿಣ ಕನ್ನಡ ಜಿಲ್ಲಾ ಸಂಘಟಕರಾದ ಭರತ್ ಕುಮಾರ್, ಮೂಡುಬಿದಿರೆ ತಾಲೂಕಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿಗಳಾದ ಭಾರತಿ ನಾಯಕ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಿಬಿಎಸ್‌ಸಿ ಶಾಲೆಯ ಸಂಯೋಜಕ ಪ್ರಸಾದ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ರೇಂಜರ್ಸ್, ಕಬ್ಸ್ ಬುಲ್ ಬುಲ್ ಮಾಸ್ಟರ್ಸ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸ್ಕಾರ್ಫ್‌ಗಳನ್ನು ವಿತರಿಸಲಾಯಿತು. ಉಪ ಮುಖ್ಮು ಶಿಕ್ಷಕಿ ಜಯಶೀಲ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಮಾನಿತ ಸ್ವಾಗತಿಸಿದರು. ಮಾನ್ಯ ವಂದಿಸಿದರು. ಪ್ರದೀಪ್ ಅತಿಥಿಗಳನ್ನು ಪರಿಚಯಿಸಿದರು.