ಸುಡು ಬಿಸಿಲಿನ ತಾಪ; ಸಹಿಸಲಾಗದೆ ಜನತೆ ಪರಿತಾಪ

| Published : Apr 04 2024, 01:04 AM IST

ಸುಡು ಬಿಸಿಲಿನ ತಾಪ; ಸಹಿಸಲಾಗದೆ ಜನತೆ ಪರಿತಾಪ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಭೂಮಿ ಕಾದ ಕಬ್ಬಿಣದಂತಾಗುತ್ತಿದ್ದು, ಬಿಸಿಲ ಧಗೆಯಿಂದ ದೇಹವನ್ನು ತಣಿಸಲು ಜನತೆ ತಂಪು ಪಾನೀಯಗಳ ಮೊರೆಹೋಗುವಂತಾಗಿದೆ.

ಬಿಜಿಕೆರೆ ಬಸವರಾಜ

ಮೊಳಕಾಲ್ಮುರು: ತಾಲೂಕಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಭೂಮಿ ಕಾದ ಕಬ್ಬಿಣದಂತಾಗುತ್ತಿದ್ದು, ಬಿಸಿಲ ಧಗೆಯಿಂದ ದೇಹವನ್ನು ತಣಿಸಲು ಜನತೆ ತಂಪು ಪಾನೀಯಗಳ ಮೊರೆಹೋಗುವಂತಾಗಿದೆ.

ಬರದಿಂದಾಗಿ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದಾಗಿದೆ. ಕಳೆದೆರಡು ವಾರಗಳಿಂದ ಹೆಚ್ಚುತ್ತಿರುವ ಬಿಸಿಲ ಧಗೆ ಜನತೆಯನ್ನು ಹೈರಾಣಾಗಿಸಿದೆ. ಬೆಳಗ್ಗೆ 7ರಿಂದಲೇ ರಣಬಿಸಿಲು ಆರಂಭವಾಗುತ್ತಿದೆ. ಮಧ್ಯಾಹ್ನ ನಂತರ ಇನ್ನಷ್ಟು ಹೆಚ್ಚುತ್ತಿದೆ. ರಾತ್ರಿಯಲ್ಲಿ ಧಗೆ ಆವರಿಸುತ್ತಿದ್ದು, ಎಲ್ಲರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಹೊರಗೆ ಹೋಗಿ ಬಂದವರು ಮೈಸುಸ್ತಿಗೆ ಒಳಗಾಗುತ್ತಿದ್ದಾರೆ. ಉಳ್ಳವರು ಮನೆಗಳಲ್ಲಿ ಎಸಿ, ಕೂಲರ್, ಫ್ಯಾನ್‌ ಬಳಸಿ ರಾತ್ರಿ ನಿದ್ರೆಗೆ ಜಾರಿದರೆ, ಬಡವರು ಮನೆಯ ಅಂಗಳದಲ್ಲಿ ಮಲಗಿ ಬೀಸುವ ಗಾಳಿಗೆ ಮೈ ಒಡ್ಡುವುದು ಕಂಡು ಬರುತ್ತಿದೆ.

ಬಿಟ್ಟು ಬಿಡದೆ ಕಾಡುತ್ತಿರುವ ರಣ ಬಿಸಿಲಿನ ಧಗೆಯಿಂದ ದೇಹ ತಣಿಸಲು ಪಟ್ಟಣದ ಜನತೆ ಕಲ್ಲಂಗಡಿ, ಎಳನೀರು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.ಗ್ರಾಮೀಣ ಭಾಗದಲ್ಲಿ ಚಿಣ್ಣರು, ದೊಡ್ಡವರು ಎನ್ನದೆ ಕೃಷಿ ಹೊಂಡಗಳಲ್ಲಿನ ನೀರಿನಲ್ಲಿ ಈಜಾಡುತ್ತಾ ದೇಹವನ್ನು ತಂಪಾಗಿಸಿಕೊಳ್ಳುತ್ತಾ ಕಾಲ ಕಳೆಯುತ್ತಿರುವುದು ಸಾಮಾನ್ಯವಾಗಿ ಕಾಣಸಿಗುತ್ತಿದೆ. ಬಿಸಿಲಿನ ಪರಿಣಾಮ ನೀರಿನ ಬಾಟಲಿ ಮತ್ತು ತಂಪು ಪಾನಿಯಗಳಿಗೆ ಭರ್ಜರಿ ಬೇಡಿಕೆಯಾಗುತ್ತಿದ್ದು, ತಂಪು ಪಾನಿಯಗಳ ಅಂಗಡಿಗಳು ಸದಾ ತುಂಬಿರುವುದು ಕಾಣಸಿಗುತ್ತಿದೆ.

ಕೃಷಿ ಕಾರ್ಮಿಕರು ಮತ್ತು ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ತತ್ತರಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೃಷಿ ಜಮೀನುಗಳಲ್ಲಿ ದಿನವಿಡೀ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರು ಕಾಣದಂತಾಗಿದ್ದಾರೆ. ಬಿಸಿಲ ಝಳಕ್ಕೆ ಕೃಷಿ ಕಾರ್ಮಿಕರು ಕೆಲಸಕ್ಕೆ ಬರದಂತಾಗಿದೆ. ಕಳೆದ ಬಾರಿ ಏಪ್ರಿಲ್ ಆರಂಭದಲ್ಲಿ 35 ಡಿಗ್ರಿ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಈ ಬಾರಿ ಏಪ್ರಿಲ್ ಆರಂಭದಲ್ಲಿಯೇ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಈ ತಿಂಗಳ ಅಂತ್ಯದೊಳಗೆ ಮಳೆ ಬಾರದಿದ್ದಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೆ ದಾಟಬಹುದು ಎನ್ನಲಾಗುತ್ತಿದೆ.

ಬಿಸಿಲಿನ ತಾಪದಿಂದ ಪ್ರಜ್ಞೆ ತಪ್ಪುವುದು, ಗಾಬರಿಗೊಳ್ಳುವುದು, ತಲೆ ಸುತ್ತುವಿಕೆ, ವಾಕರಿಕೆ, ಸ್ನಾಯು ಸೆಳೆತ, ಅಲಸ್ಯ ಸೇರಿದಂತೆ ನಾನಾ ಸಮಸ್ಯೆಗಳ ಬಾಧೆಗೆ ಒಳಗಾಗುತ್ತಿದ್ದಾರೆ. ವಿನಾಕಾರಣ ಅಲೆದಾಡದೆ ಸದಾ ನೀರು ಕುಡಿಯುತ್ತಾ ನಿರ್ಜಲೀಕರಣವನ್ನು ನಿಯಂತ್ರಿಸಬೇಕು. ಜತೆಗೆ ನವಜಾತ ಶಿಶುಗಳು, ಗರ್ಭಿಣಿಯರು, ಹೊರಗಡೆ ಕೆಲಸ ಮಾಡುವಂತವರು, ಮಾನಸಿಕ ಸಮಸ್ಯೆಗಳಿಗೆ ಒಳಗಾದವರು, ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುವಂತವರು ಹೆಚ್ಚು ಹೊತ್ತು ಹೊರಗಿರದೆ ಉತ್ತಮ ಗಾಳಿ ಹಾಗೂ ನೆರಳಿನ ಆಶ್ರಯದಲ್ಲಿರಬೇಕು ಎನ್ನುವುದು ವೈದ್ಯರ ಸೂಚನೆಯಾಗಿದೆ.