ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ, ಅಕ್ರಮ ವಿಲೇವಾರಿ, ಅವ್ಯವಹಾರ, ಕಾನೂನುಬಾಹಿರ, ಕರ್ತವ್ಯಲೋಪ ಹಾಗೂ ಅನೇಕ ಶಾಖೆಗಳಲ್ಲಿ ನಡೆಯುತ್ತಿರುವ ಲಂಚಗುಳಿತನ, ನಿಗಧಿತ ಸಮಯಕ್ಕೆ ಕಡತಗಳನ್ನು ಇತ್ಯರ್ಥ ಪಡಿಸದೇ ವರ್ಷಾನುಗಟ್ಟಲೆ ಇಟ್ಟು ರೈತರಿಗೆ ಜನಸಾಮಾನ್ಯರನ್ನು ಕಚೇರಿಗಳಿಗೆ ಅಲೆದಾಡಿಸುವುದು ನಡೆಯುತ್ತಿದೆ.

ಮಂಡ್ಯ:

ಜಿಲ್ಲೆಯ ಸರ್ಕಾರಿ ಕಚೇರಿ ಕಾರ್ಯವೈಖರಿ ಹಾಗೂ ದೂರುಗಳ ಸಮಗ್ರ ಪರಿಶೀಲನೆ ಮಾಡಿ ಹಲವು ವರ್ಷಗಳಿಂದ ಬಾಕಿ ಇರುವ ದೂರಿನ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ಉಪಲೋಕಾಯುಕ್ತರು, ವಿಚಾರಣೆ ನ್ಯಾಯಾಧೀಶರಲ್ಲಿ ರೈತ ಸಂಘದ ಮುಖಂಡ ಕಿರಂಗೂರು ಪಾಪು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಪ್ರವಾಸ ಕೈಗೊಂಡಿರುವ ಉಪಲೋಕಾಯುಕ್ತ ವೀರಪ್ಪರವರು ಹಾಗೂ ವಿಚಾರಣೆ ನ್ಯಾಯಾಧೀಶರಾಗಿರುವ ಅರವಿಂದ ಸೇರಿದಂತೆ ಇನ್ನಿತರೆ ಅಧಿಕಾರಿಗಳ ತಂಡ ಜಿಲ್ಲೆಯ ಸರ್ಕಾರಿ ಕಚೇರಿ ಕಾರ್ಯವೈಖರಿ ಹಾಗೂ ಹಲವು ದೂರುಗಳ ಸಮಗ್ರ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ, ಅಕ್ರಮ ವಿಲೇವಾರಿ, ಅವ್ಯವಹಾರ, ಕಾನೂನುಬಾಹಿರ, ಕರ್ತವ್ಯಲೋಪ ಹಾಗೂ ಅನೇಕ ಶಾಖೆಗಳಲ್ಲಿ ನಡೆಯುತ್ತಿರುವ ಲಂಚಗುಳಿತನ, ನಿಗಧಿತ ಸಮಯಕ್ಕೆ ಕಡತಗಳನ್ನು ಇತ್ಯರ್ಥ ಪಡಿಸದೇ ವರ್ಷಾನುಗಟ್ಟಲೆ ಇಟ್ಟು ರೈತರಿಗೆ ಜನಸಾಮಾನ್ಯರನ್ನು ಕಚೇರಿಗಳಿಗೆ ಅಲೆದಾಡಿಸುವುದು ನಡೆಯುತ್ತಿದೆ ಎಂದು ದೂರಿದ್ದಾರೆ.

ತಹಸೀಲ್ದಾರ್ ಚೇತನ್‌ಯಾದವ್‌ ಅವರು ಸರ್ಕಾರಿ ಭೂಮಿ ಹಾಗೂ ಕಾವೇರಿ ನದಿಪಾತ್ರವನ್ನು ಸಂರಕ್ಷಿಸುವಲ್ಲಿಯೂ ವಿಫಲರಾಗಿದ್ದಾರೆ. ಸರ್ಕಾರಿ ಜಮೀನು ಹಾಗೂ ಕಾವೇರಿ ನದಿಪಾತ್ರದ ಬಫರ್‌ಜೋನ್ ಗುರುತಿಸಿ ಎಂದು ಲೋಕಾಯುಕ್ತರು ಹಲವು ಬಾರಿ ನಾಮಫಲಕ ಅಳವಡಿಸಿ ಎಂದು ಹೇಳಿದರೂ ಬೇಜವಾಬ್ದಾರಿತನ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾನೂನುಬಾಹಿರವಾಗಿ ನದಿಗಳ ಬಫರ್‌ಜೋನ್‌ನಲ್ಲಿ ಬಡಾವಣೆಗಳನ್ನು ನಿರ್ಮಿಸಲು ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಶಾಮೀಲಾಗಿ ವ್ಯವಸಾಯ ಮಾಡಬೇಕಾದ ಕೃಷಿ ಭೂಮಿಗಳನ್ನು ಮುಚ್ಚುತ್ತಾ ಬರುತ್ತಿರುವುದು ಆತಂಕದ ವಿಷಯ. ಕಾನೂನು ಬಾಹಿರವಾಗಿ ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಆ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟುವುದಕ್ಕೆ ಪುರಸಭಾ, ನಗರಸಭಾ, ಪಂಚಾಯಿತಿಗಳಲ್ಲಿ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ತಾಲೂಕು ಕಚೇರಿ ಹಾಗೂ ಪುರಸಭೆ, ಗ್ರಾಪಂಗಳಲ್ಲಿ ಸರ್ಕಾರಿ ಭೂಮಿ ಖಾತೆ, ಇ-ಸ್ವತ್ತು ಮಾಡಿರುವುದು, ನದಿಪಾತ್ರದಲ್ಲಿ ಅಕ್ರಮ ಕಟ್ಟಡಗಳಿಗೆ ಅವಕಾಶ ನೀಡಿರುವುದು ಕಾನೂನುಬಾಹಿರ. ಇದರ ಹಿಂದೆ ಅನೇಕ ತೆರಿಗೆ ವಂಚನೆಸ ಮುಜರಾಯಿ ಇಲಾಖೆಗಳಲ್ಲಿ ಅರ್ಚಕರಲ್ಲದವರಿಗೆ ಲಕ್ಷ ಲಕ್ಷ ಹಣ ಕೊಟ್ಟಿರುವ ಬಗ್ಗೆ ತನಿಖೆ ನಡೆಸಬೇಕು. ಪ್ರಕೃತಿ ವಿಕೋಪದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಬೇಕಾದ ಹಣ ಬಲಾಢ್ಯರ ಪಾಲಾಗಿದೆ. ಆದ್ದರಿಂದ ಸರ್ಕಾರಿ ಕಡತಗಳನ್ನು ಪರಿಶೀಲನೆ ಮಾಡಿ ಸಮಗ್ರ ತನಿಖೆ ಮಾಡಬೇಕು ಎಂದು ಉಪಲೋಕಾಯುಕ್ತ ನ್ಯಾಯಾಧೀಶರಲ್ಲಿ ಪಾಪು ಮನವಿ ಮಾಡಿದ್ದಾರೆ.