ನಗರದ ವಸಂತನರಸಾಪುರ, ಹಿರೇಹಳ್ಳಿ ಹಾಗೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಜಾಗ ಪಡೆದು, ಉದ್ಯಮ ಪ್ರಾರಂಭಿಸಲು ಪರಿಶಿಷ್ಟ ಜಾತಿ ಮತ್ತು ವರ್ಗದ ಉದ್ದಿಮೆದಾರರಿಗೆ ವಿಫುಲ ಅವಕಾಶಗಳಿದ್ದು, ಈ ಕಾರ್ಯಕ್ರಮ ಕೇವಲ ಜಾಹಿರಾತಿಗೆ ಸಿಮಿತವಾಗದೆ, ನಿಜವಾಗಿಯೂ ಜಾರಿಗೆ ಬರಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮುರಳೀಧರ ಹಾಲಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ವಸಂತನರಸಾಪುರ, ಹಿರೇಹಳ್ಳಿ ಹಾಗೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಜಾಗ ಪಡೆದು, ಉದ್ಯಮ ಪ್ರಾರಂಭಿಸಲು ಪರಿಶಿಷ್ಟ ಜಾತಿ ಮತ್ತು ವರ್ಗದ ಉದ್ದಿಮೆದಾರರಿಗೆ ವಿಫುಲ ಅವಕಾಶಗಳಿದ್ದು, ಈ ಕಾರ್ಯಕ್ರಮ ಕೇವಲ ಜಾಹಿರಾತಿಗೆ ಸಿಮಿತವಾಗದೆ, ನಿಜವಾಗಿಯೂ ಜಾರಿಗೆ ಬರಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮುರಳೀಧರ ಹಾಲಪ್ಪ ತಿಳಿಸಿದರು.ನಗರದ ಕೈಗಾರಿಕಾ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯವು, ಕರ್ನಾಟಕ ಮಹಿಳಾ ಉದ್ದಿಮೆದಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಎಸ್ಸಿಎಸ್ಟಿ ಉದ್ದಿಮೆದಾರರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಉದ್ದಿಮೆದಾರರು ಇಂದಿನ ಪೈಪೋಟಿ ಯುಗದಲ್ಲಿ ಉದ್ದಿಮೆದಾರರಾಗಿ ಬಹಳ ಕಾಲ ಉಳಿಯುವುದು ನಿಜಕ್ಕೂ ತ್ರಾಸದಾಯಕ. ಇಂತಹ ಕಾರ್ಯಗಾರ ಗಳು ನಿಮಗೆ ತಮ್ಮ ಉದ್ದಿಮೆಯನ್ನು ಯಶಸ್ಸಿನ ಕಡೆಗೆ ತೆಗೆದುಕೊಂಡು ಹೋಗಲು ಇರುವ ಮಾರ್ಗಗಳೇನು, ಹಣಕಾಸಿನ ಸಹಾಯ,ಕಚ್ಚಾವಸ್ತುಗಳ ಖರೀದಿ,ಮಾರುಕಟ್ಟೆ, ಅಮದು ಇನ್ನಿತರ ವಿಚಾರಗಳನ್ನು ನುರಿತ ಸಂಸ್ಥೆಗಳು ಮಾರ್ಗದರ್ಶನ ಮಾಡಲಿದ್ದಾರೆ. ಹಾಗಾಗಿ ಇಂತಹ ಕಾರ್ಯಗಾರಗಳಲ್ಲಿ ಹಾಲಿ ಉದ್ದಿಮೆದಾರರು ತಮ್ಮ ಉದ್ದಿಮೆಯನ್ನು ವಿಸ್ತರಿಸಲು, ಹೊಸ ಉದ್ದಿಮೆ ಸ್ಥಾಪಿಸಲು ಬೇಕಾದ ಅಗತ್ಯ ಮಾಹಿತಿ ದೊರೆಯಲಿದೆ ಎಂದರು.ಕೈಗಾರಿಕೆಗಳಿಗೆ ಹಣಕಾಸಿನ ನೆರವು ಅತಿಮುಖ್ಯ. ಎಸ್.ಬಿ.ಐನ ಲೀಡ್ ಬ್ಯಾಂಕ್ ಮ್ಯಾನೇಜರ್ , ಸರ್ಕಾರ ಅಥವಾ ಸಂಘ ಸಂಸ್ಥೆಗಳು ಆಯೋಜಿಸುವ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಬರುವುದಿಲ್ಲ. ತಮ್ಮ ಪರವಾಗಿ ಬೇರೆಯವರನ್ನು ಕಳುಹಿಸುವುದಿಲ್ಲ. ಉದ್ದಿಮೆದಾರರೆಂದರೆ ಅಲರ್ಜಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇವರ ಬಗ್ಗೆ ಮೂರು ಜನ ಸಂಸದರಿಗೆ, ಎಸ್.ಬಿ.ಐನ ಹಿರಿಯ ಅಧಿಕಾರಿಗಳಿಗೆ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರಿಗೂ ದೂರು ನೀಡಲಾಗಿದೆ. ಆದರೂ ಇಂದಿನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಈ ರೀತಿಯ ಅಧಿಕಾರಿಯಿಂದ ನವ ಉದ್ದಿಮೆದಾರರು ಏನನ್ನು ನಿರೀಕ್ಷಿಸಲು ಸಾಧ್ಯ ಎಂದರು.
ತುಮಕೂರು ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಸೇವಂತ್ ವಾಸುದೇವ್ ಮಾತನಾಡಿ,ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರು ತಮ್ಮ ಉದ್ದಿಮೆಗಳನ್ನು ಸ್ಥಾಪಿಸಲು ಸರಕಾರದಿಂದ ಯಾವ ಯಾವ ನೆರವು ದೊರೆಯಲಿದೆ.ಕಚ್ಚಾವಸ್ತು ಖರೀದಿ, ಮಾರಾಟ, ಜಾಗ ಇತ್ಯಾದಿ ಮಾಹಿತಿಗಳನ್ನು ಈ ಕಾರ್ಯಾಗಾರದಲ್ಲಿ ಅಧಿಕಾರಿಗಳು ತಿಳಿಸಿಕೊಡಲಿದ್ದಾರೆ. ಹಾಗಾಗಿ ಆಗಮಿಸಿರುವ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಎಸ್ಸಿ, ಎಸ್ಟಿ ಉದ್ದಿಮೆದಾರರ ಯೋಜನೆಯ ಅಧಿಕಾರಿ ಡಾ.ಕೆ.ಸುರೇಶ್ ಮಾತನಾಡಿ, ದಲಿತ ಉದ್ದಿಮೆದಾರರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಆಯೋಜಿಸಲಾಗುತ್ತಿದೆ. ಇದರಲ್ಲಿ ಆಸಕ್ತ ಎಸ್ಸಿ, ಎಸ್ಟಿ ಉದ್ದಿಮೆದಾರರಿಗೆ ಜಾಗೃತಿ ಜೊತೆಗೆ, ಕೌಶಲ್ಯವೃದ್ದಿ, ಜಾಗ, ಹಣಕಾಸಿನ ನೆರವು,ಕಚ್ಚಾವಸ್ತು ಖರೀದಿ,ಯಂತ್ರೋಪಕರಣ ಬಗ್ಗೆ ಅರಿವು ಮೂಡಿಸಿ, ಅವರನ್ನು ಯಶಸ್ವಿ ಉದ್ದಿಮೆದಾರರನ್ನು ಮಾಡುವ ಗುರಿ ಹೊಂದಿದ್ದೇವೆ ಎಂದರು.
ಕಾರ್ಯಕ್ರಮವನ್ನು ಕರ್ನಾಟಕ ಮಹಿಳಾ ಉದ್ದಿಮೆದಾರರ ಸಂಘದ ಅಧ್ಯಕ್ಷ ಭುವನೇಶ್ವರಿ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜು, ಮಹಿಳಾ ಉದ್ದಿಮೆದಾರರ ಸಂಘದ ಉಪಾಧ್ಯಕ್ಷ ಜಗದೀಶ್ವರಿ.ಡಿ. ಉಪಸ್ಥಿತರಿದ್ದರು.ಸಣ್ಣ ಮತ್ತು ಮದ್ಯಮ ಉದ್ದಿಮೆದಾರರ ಪರವಾಗಿ ಹಲವರು ಎನ್.ಜಿ.ಓಗಳ ಪ್ರತಿನಿಧಿಗಳು ಪಾಲ್ಗೊಂಡು, ಪಿಪಿಟಿ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದರು.
