ನಾಗಮಂಗಲ ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಸುರಕ್ಷತೆಯಿಂದ ಇರಬೇಕಾದ ಮೂಲ ಭೂದಾಖಲೆ ಕಡತಗಳನ್ನು ಅಭಿಲೇಖಾಲಯ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಎಂ.ಅಶೋಕ್‌ಕುಮಾರ್ ಎಂಬಾತನೇ ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿರುವುದು ತನಿಖೆಯಿಂದ ಬಯಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಸುರಕ್ಷತೆಯಿಂದ ಇರಬೇಕಾದ ಮೂಲ ಭೂದಾಖಲೆ ಕಡತಗಳನ್ನು ಅಭಿಲೇಖಾಲಯ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಎಂ.ಅಶೋಕ್‌ಕುಮಾರ್ ಎಂಬಾತನೇ ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿರುವುದು ತನಿಖೆಯಿಂದ ಬಯಲಾಗಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದ ಕೈ ಬರವಣಿಗೆ ಆರ್‌ಟಿಸಿ, ಎಂಆರ್ ಸೇರಿದಂತೆ ಮೂಲ ಭೂದಾಖಲೆ ಕಡತಗಳ ರಾಶಿ ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಕಸದ ತೊಟ್ಟಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಅವುಗಳನ್ನು ಕಸದ ತೊಟ್ಟಿಯಿಂದ ಹೊರತೆಗೆದು ತಹಸೀಲ್ದಾರ್ ಅವರ ಗಮನಕ್ಕೆ ತಂದಿದ್ದರು.

ಪ್ರಕರಣದ ಗಂಭೀರತೆಯನ್ನು ಅರಿತು ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಮಹಜರು ನಡೆಸಿ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಎಲ್ಲಾ ಭೂದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದ ತಹಸೀಲ್ದಾರ್ ಡಾ.ಅಶೋಕ್ ಈ ಬಗ್ಗೆ ತನಿಖೆ ನಡೆಸಿ ತ್ವರಿತಗತಿಯಲ್ಲಿ ಸಮಗ್ರ ವರದಿ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳ ವಿಶೇಷ ತಂಡ ರಚಿಸಿದ್ದರು.

ಬುಧವಾರ ಬೆಳಗ್ಗೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಸಮ್ಮುಖದಲ್ಲಿ ವಶಪಡಿಸಿಕೊಂಡಿದ್ದ ಎಲ್ಲಾ ಭೂದಾಖಲೆಗಳನ್ನು ಪರಿಶೀಲಿಸಿದ ತನಿಖಾ ತಂಡದ ಅಧಿಕಾರಿಗಳು 38 ಕೈಬರಹದ ಆರ್‌ಟಿಸಿ, 10ಎಂಆರ್, ಹರಿದು ಚಿಂದಿಯಾಗಿರುವ 107 ಐಎಲ್‌ಆರ್ ಪ್ರತಿಗಳು, 70ಆರ್‌ಆರ್ ಇಂಡೆಕ್ಸ್ ತುಕುಡುಗಳು, ಖಾಲಿ ಇರುವ 238ಎಂಆರ್ ಪ್ರತಿಗಳು, 13ಖಾಲಿ ಆರ್‌ಟಿಸಿ ನಮೂನೆ, ಗುರುತಿಸಲಾಗದಂತಹ 90 ಕೈಬರಹದ ಪಹಣಿ ತುಕುಡು, 248 ಖಾಲಿ ಎಂಆರ್ ನಮೂನೆ ಸೇರಿದಂತೆ ವಿಲೇವಾರಿಗೆ ಅರ್ಹವಾಗಿರುವ 225ಕ್ಕೂ ಹೆಚ್ಚು ಅನುಪಯುಕ್ತ ದಾಖಲಾತಿಗಳೆಂದು ಗುರುತಿಸಿದರು.

ಪರಿಶೀಲನೆ ವೇಳೆ ಗುರುತಿಸಿದ ಎಲ್ಲಾ ದಾಖಲಾತಿಗಳನ್ನು ಸಂರಕ್ಷಿಸಲಾಗಿದೆ. ಸಂಬಂಧಿಸಿದ ಗುಮಾಸ್ತರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಲಾಗಿದೆ ಎಂದು ತಹಸೀಲ್ದಾರ್ ಡಾ.ಅಶೋಕ್ ತಿಳಿಸಿದ್ದಾರೆ.

ಉಪತಹಸೀಲ್ದಾರ್ ಬಿ.ಹರ್ಷ, ರಾಜಸ್ವ ನಿರೀಕ್ಷಕರಾದ ಕೆ.ಎನ್.ಮಧುಸೂಧನ್, ಎಂ.ಟಿ.ಗೋವಿಂದರಾಜು, ಎಸ್.ವೈ.ಮಂಜುನಾಥ್, ಗ್ರಾಮ ಆಡಳಿತಾಧಿಕಾರಿಗಳಾದ ಕೆ.ದೀಪಕ್, ಈರಣ್ಣ ತಿಪ್ಪಣ್ಣ ದಾನಸೂರ, ಜಿ.ತೇಜಸ್ವಿನಿ, ಎಸ್.ಭಾರತಿ ತನಿಖಾ ತಂಡದಲ್ಲಿ ಕರ್ತವ್ಯ ನಿರ್ವಹಿಸಿದರು.ಅಮಾನತಿಗೆ ಶಿಫಾರಸು

ಭೂದಾಖಲೆಗಳನ್ನು ಸಂರಕ್ಷಿಸುವಲ್ಲಿ ಅಭಿಲೇಖಾಲಯದ ದ್ವಿತೀಯ ದರ್ಜೆ ಸಹಾಯಕ ಎಂ.ಅಶೋಕ್‌ಕುಮಾರ್ ವಿಫಲರಾಗಿದ್ದು, ಸಿಬ್ಬಂದಿ ಬೇಜವಾಬ್ದಾರಿತನದಿಂದ ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ವರ್ತಿಸಿರುವುದು, ಸರ್ಕಾರಿ ಕೆಲಸದಲ್ಲಿ ನಿರಾಸಕ್ತಿ ಹೊಂದಿರುವುದು, ಸೇವಾ ಮನೋಭಾವ ಹೊಂದಿಲ್ಲದಿರುವುದು ಕಂಡುಬಂದಿದೆ. ಸಿಬ್ಬಂದಿ ಸಾರ್ವಜನಿಕರಿಗೆ ಕಾರ್ಯಕ್ಷಮತೆಯಿಂದ ಸಮಗ್ರತೆಯಿಂದ ಸೇವೆ ನೀಡುವುದು ಸಂಶಯಾಸ್ಪದವಾಗಿರುತ್ತದೆ. ಹಾಗಾಗಿ ಅಭಿಲೇಖಾಲಯದ ದ್ವಿತೀಯ ದರ್ಜೆ ಸಹಾಯಕ ಎಂ.ಅಶೋಕ್‌ಕುಮಾರ್ ಅವರನ್ನು ಇಲಾಖಾ ವಿಚಾರಣೆಗೆ ಒಳಪಡಿಸಿ ಅಮಾನತುಗೊಳಿಸಲು ಶಿಫಾರಸ್ಸು ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

-ಡಾ.ಅಶೋಕ್, ನಾಗಮಂಗಲ ತಹಸೀಲ್ದಾರ್ ಅನುಪಯುಕ್ತವೆಂದು ಬಿಸಾಡಿದ್ದೆ

ಅಭಿಲೇಖಾಲಯ ಶಾಖೆಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಹರಿದು ಚಿಂದಿಯಾಗಿದ್ದ ಕೆಲ ಭೂದಾಖಲೆಗಳು ಅನುಪಯುಕ್ತವೆಂದು ಭಾವಿಸಿ ಪಿಂಡಿಕಟ್ಟಿ ಭಾನುವಾರ ಮಧ್ಯಾಹ್ನವೇ ತಾಲೂಕು ಕಚೇರಿ ಆವರಣದಲ್ಲಿರುವ ಕಸದ ತೊಟ್ಟಿಗೆ ಬಿಸಾಡಿದ್ದೆ. ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಗೊತ್ತಾಗಲಿಲ್ಲ. ನನ್ನಿಂದ ತಪ್ಪಾಗಿದೆ.

-ಎಂ.ಅಶೋಕ್‌ಕುಮಾರ್, ಅಭಿಲೇಖಾಲಯ ಶಾಖೆಯ ದ್ವಿ.ದ.ಸ.

ಎಸ್‌ಡಿಎ ಅಮಾನತು: ಪ್ರಕರಣ ದಾಖಲಿಸುವಂತೆ ಡೀಸಿ ಸೂಚನೆ

ನಾಗಮಂಗಲ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಕಸದ ತೊಟ್ಟಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಬಿಸಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಾಗಮಂಗಲ ತಹಸೀಲ್ದಾರ್ ಡಾ.ಅಶೋಕ್ ಅವರು ನೀಡಿದ ವರದಿಯನ್ನಾಧರಿಸಿ ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಎಂ.ಅಶೋಕ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬುಧವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010ರ ನಿಯಮ 9ರ ಪ್ರಕಾರ ಎಂ.ಅಶೋಕ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿ ಆದೇಶಿಸಿದ್ದಾರೆ.