ಸಾರಾಂಶ
ನಿವೃತ್ತಿಯ ಪಿಂಚಣಿ ಹಣ ಪಡೆಯುವುದಕ್ಕಾಗಿ ದಾಖಲೆ ಒದಗಿಸಿ ಕೊಡುವುದಕ್ಕಾಗಿ ಬಿಇಒ ಕಚೇರಿ ಎಸ್‌ಡಿಎ ಸಿಬ್ಬಂದಿ ವೆಂಕಟೇಶ್ ₹12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿಂದೆಯೂ ಸಹ ಬೇರೊಬ್ಬ ಶಿಕ್ಷಕರಿಂದ ಸಹ ₹33 ಸಾವಿರ ಲಂಚದ ಹಣವನ್ನು ಆನ್‌ಲೈನ್ ಮೂಲಕ ಪಡೆದಿರುವುದು ಸಹ ಲೋಕಾಯುಕ್ತ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರಪಿಂಚಣಿ ಹಣ ಪಡೆಯಲು ದಾಖಲೆ ಒದಗಿಸಲು ನಿವೃತ್ತ ಶಿಕ್ಷಕರೊಬ್ಬರ ಬಳಿ ಕಚೇರಿಯಲ್ಲಿಯೇ ₹12 ಸಾವಿರ ಲಂಚ ಸ್ವೀಕರಿಸುವ ವೇಳೆ ಬಿಇಒ ಕಚೇರಿ ಎಸ್‌ಡಿಎ ಸಿಬ್ಬಂದಿ ವೆಂಕಟೇಶ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದಾರೆ.
ಚಿನಕುರಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಶಿಕ್ಷಕ ಸುರೇಶ್‌ಬಾಬು ಬಳಿ ನಿವೃತ್ತಿಯ ಪಿಂಚಣಿ ಹಣ ಪಡೆಯುವುದಕ್ಕಾಗಿ ದಾಖಲೆಗಳನ್ನು ಒದಗಿಸಿ ಕೊಡುವುದಕ್ಕಾಗಿ ಬಿಇಒ ಕಚೇರಿ ಎಸ್‌ಡಿಎ ಸಿಬ್ಬಂದಿ ವೆಂಕಟೇಶ್ ₹12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಈ ವಿಚಾರವಾಗಿ ನಿವೃತ್ತ ಶಿಕ್ಷಕ ಸುರೇಶ್‌ಬಾಬು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು. ಶುಕ್ರವಾರ ಮಧ್ಯಾಹ್ನ ಬಿಇಒ ಕಚೇರಿಯಲ್ಲಿ ಎಸ್‌ಡಿಎ ಸಿಬ್ಬಂದಿ ವೆಂಕಟೇಶ್ ಸುರೇಶ್‌ಬಾಬು ಅವರ ಬಳಿ ಲಂಚಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದಾರೆ.
ಎಸ್‌ಡಿಎ ಸಿಬ್ಬಂದಿ ವೆಂಕಟೇಶ್ ಅವರು ಈ ಹಿಂದೆಯೂ ಸಹ ಬೇರೊಬ್ಬ ಶಿಕ್ಷಕರಿಂದ ಸಹ ₹33 ಸಾವಿರ ಲಂಚದ ಹಣವನ್ನು ಆನ್‌ಲೈನ್ ಮೂಲಕ ಪಡೆದಿರುವುದು ಸಹ ಲೋಕಾಯುಕ್ತ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಪರಿಶೋಧನೆ ನಡೆಸಿದರು.ಬಳಿಕ ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ, ಪರಿಶೋಧನೆಯ ಬಳಿಕ ಕಾನೂನಿನ ಪ್ರಕಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಡಿವೈಎಸ್‌ಪಿ ಸುನೀಲ್‌ಕುಮಾರ್ ತಿಳಿಸಿದರು. ಕಾರ್‍ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.