ಎಸ್‌ಡಿಎ ರುದ್ರಣ್ಣದು ಆತ್ಮಹತ್ಯೆಯಲ್ಲ, ಕೊಲೆ: ಕಚೇರಿಗೆ ಪತ್ರ?

| Published : Nov 19 2024, 12:49 AM IST

ಎಸ್‌ಡಿಎ ರುದ್ರಣ್ಣದು ಆತ್ಮಹತ್ಯೆಯಲ್ಲ, ಕೊಲೆ: ಕಚೇರಿಗೆ ಪತ್ರ?
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ತಹಸೀಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರ ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್‌ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬರೆದಿರುವ ಪತ್ರ ಎಲ್ಲೆಡೆ ಹರದಾಡಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಹಸೀಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್‌ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬರೆದಿರುವ ಪತ್ರವೊಂದು ಎಲ್ಲೆಡೆ ಹರದಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ.ಆದರೆ, ಅನಾಮಧೇಯ ಪತ್ರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಹೇಳಿದರೆ, ಇದು ತನಿಖಾ ಹಂತದಲ್ಲಿದ್ದು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಕೂಡ ಹೇಳಿದ್ದಾರೆ.

ವೈರಲ್‌ ಆಗಿರುವ ಈ ಅನಾಮಧೇಯ ಪತ್ರದಲ್ಲಿ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದು ಕೊಲೆ. ತಹಸೀಲ್ದಾರ್ ಆಪ್ತ, ವಾಹನ ಚಾಲಕ ಯಲ್ಲಪ್ಪ ಬಡಸದ ಕೊಲೆಯ ಸೂತ್ರಧಾರ. ತಹಸೀಲ್ದಾರ ಜೀಪ್ ಚೆಕ್ ಮಾಡಿದರೆ ಎಲ್ಲಾ ಮಾಹಿತಿ ಸಿಗುತ್ತದೆ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆಯ ರಹಸ್ಯ ಹೊರಬರುತ್ತದೆ. ಸತ್ತವನಿಗೆ ನ್ಯಾಯ ಸಿಗಬೇಕು. ಕೇಸ್ ಮುಚ್ಚಿ ಹಾಕಬಾರದು ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ಪತ್ರ ಬಂದಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಬೇಕಿದೆ ಅಷ್ಟೇ.

ರುದ್ರಣ್ಣ ಆತ್ಮಹತ್ಯೆ ಪ್ರಕರಣದ ಆರೋಪಿಗಳಾದ ತಹಸೀಲ್ದಾರ ಬಸವರಾಜ ನಾಗರಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಪ್ತ ಸೋಮು ದೊಡವಾಡಿ ಮತ್ತು ಅಶೋಕ ಕಬ್ಬಲಿಗೇರ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಅನಾಮಧೇಯ ಪತ್ರ ಕಚೇರಿಗಳಿಗೆ ಹರಿದಾಡುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಅವನನ್ನು ಕೊಲೆ ಮಾಡಲಾಗಿದೆ. ಪೊಲೀಸರು ನಮಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕು. ಕೊಲೆ ಮಾಡಿದ ಆರೋಪಿಗಳು ಜಾಮೀನು ಪಡೆದು ರಾಜಾರೋಷವಾಗಿ ಕೆಲಸಕ್ಕೆ ಬಂದಿದ್ದಾರೆ. ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ.

- ಮಲ್ಲವ್ವ ಯಡವಣ್ಣವರ, ರುದ್ರಣ್ಣನ ತಾಯಿ

ತಹಸೀಲ್ದಾರ ಕಚೇರಿಯಲ್ಲಿ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಎಂಬ ಅನಾಮಧೇಯ ಪತ್ರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ತಪಾಸಣೆ ಮಾಡಲಾಗುವುದು. ರುದ್ರಣ್ಣ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

- ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಪೊಲೀಸ್‌ ಆಯುಕ್ತರು