ಎಸ್‌ಡಿಎಂ ‘ಝೇಂಕಾರ’ ಉತ್ಸವ: ಸ್ಟಾರ್‌ ನೈಟ್‌ ವಿತ್‌ ರಮೇಶ್‌ ಅರವಿಂದ್‌

| Published : Mar 16 2024, 01:50 AM IST

ಎಸ್‌ಡಿಎಂ ‘ಝೇಂಕಾರ’ ಉತ್ಸವ: ಸ್ಟಾರ್‌ ನೈಟ್‌ ವಿತ್‌ ರಮೇಶ್‌ ಅರವಿಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾಟ್ ಸೀಟ್‍ನಲ್ಲಿದ್ದ ರಮೇಶ್ ಅರವಿಂದ್ ಅವರು, ಯಶಸ್ಸಿನ ರಹಸ್ಯ, ವೀರೇಂದ್ರ ಹೆಗ್ಗಡೆ ಜೊತೆಯ ಒಡನಾಟ, ಸಿರಿ ರಾಯಭಾರಿಯಾಗಿ ಅನುಭವ, ರ್ಯಾಪಿಡ್ ಫಯರ್‌, ವೈಯಕ್ತಿಕ ಬದುಕಿನ ಕುರಿತು ಪ್ರಶ್ನೆಗಳಿಗೆ ರಮೇಶ್ ಉತ್ತರಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಸಂಜೆ ಜರುಗಿದ ಪ್ರಸ್ತಕ ವರ್ಷದ ರಾಷ್ಟ್ರೀಯ ಶೈಕ್ಷಣಿಕ, ಸಾಂಸ್ಕೃತಿಕ ಉತ್ಸವ ‘ಝೇಂಕಾರದ’ 5 ನೇ ಆವೃತ್ತಿಯ ‘ಸ್ಟಾರ್ ನೈಟ್ ವಿತ್ ರಮೇಶ್ ಅರವಿಂದ್ ’ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವು ವೀಕೆಂಡ್ ವಿತ್ ರಮೇಶ್ ಮಾದರಿಯಲ್ಲಿ ನಡೆಯಿತು. ಸಂಘಟನಾ ಕಾರ್ಯದರ್ಶಿ ಸುವಿರ್ ಜೈನ್ ಕಾರ್ಯಕ್ರಮ ನಿರೂಪಿಸಿದರೆ, ಹಾಟ್ ಸೀಟ್‍ನಲ್ಲಿದ್ದ ರಮೇಶ್ ಅರವಿಂದ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಯಶಸ್ವಿನ ರಹಸ್ಯ, ವೀರೇಂದ್ರ ಹೆಗ್ಗಡೆ ಜೊತೆಯ ಒಡನಾಟ, ಸಿರಿ ರಾಯಭಾರಿಯಾಗಿ ಅನುಭವ, ರ್ಯಾಪಿಡ್ ಫಯರ್‌, ವೈಯಕ್ತಿಕ ಬದುಕಿನ ಕುರಿತು ಪ್ರಶ್ನೆಗಳಿಗೆ ರಮೇಶ್ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು. ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ. ನಿಮ್ಮಲ್ಲಿರುವ ಪ್ರತಿಭೆಗಳಿಗೆ ಈ ರೀತಿಯ ಕಾರ್ಯಕ್ರಮ ವೇದಿಕೆಯಾಗಲಿ ಎಂದು ಆಶೀರ್ವದಿಸಿದರು.ಸಿರಿ ಗ್ರಾಮೋದ್ಯೋಗದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ಜನಾರ್ದನ್ ಮಾತನಾಡಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಹುಟ್ಟು, ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. ನಿರುದ್ಯೋಗದಲ್ಲಿರುವ ಯುವಕ ಯುವತಿಯರಿಗೆ ತರಬೇತಿ ಕೊಟ್ಟ ನಂತರ ಅವರಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಆರಂಭವಾಗಿದೆ. ಕಳೆದ 20 ವರ್ಷಗಳಲ್ಲಿ 200 ಕ್ಕೂ ಅಧಿಕ ಉತ್ಪನ್ನಗಳು ಸಿರಿಯಿಂದ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಸಾವಿರಾರು ಉದ್ಯೋಗ ಸೃಷ್ಟಿ ಮಾಡಿದ್ದು, ನಾಲ್ಕು ಸಾವಿರ ಕುಟುಂಬಗಳಿಗೆ ಆಧಾರವಾಗಿದೆ ಎಂದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಸಿರಿ ಗ್ರಾಮೋದ್ಯೋಗ ಸಂಸ್ಥೆ ಮಾಡಿತ್ತು. ಕಾರ್ಯಕ್ರಮದಲ್ಲಿ ಏಳು ಸಿರಿಧಾನ್ಯಗಳನ್ನು ಒಳಗೊಂಡ ‘ಸಿರಿ ಪುಷ್ಟಿ’ ಆರೋಗ್ಯವರ್ಧಕವನ್ನು ಮಾರುಕಟ್ಟೆಗೆ ಲೋಕಾರ್ಪಣೆ ಮಾಡಲಾಯಿತು. ನಟ ರಮೇಶ್ ಅರವಿಂದ್ ಅವರ ಕಲಾಯಾನದ ಕುರಿತು ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ‘ಜೀವ ಭಾವಧ್ವನಿ’ ವಿಶೇಷ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಡಾ. ಡಿ. ವೀರೇಂದ್ರ ಹೆಗ್ಗಡೆ ರಮೇಶ್ ಅರವಿಂದ್ ಅವರನ್ನು ಗೌರವಿಸಿದರು. ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ ಪಿ., ಕೊಡಗು ವಿವಿ ಉಪ ಕುಲಪತಿ ಅಶೋಕ್ ಎಸ್. ಆಲೂರ್ ಉಪಸ್ಥಿತರಿದ್ದರು.